Advertisement

ಬುದ್ಧಿಜೀವಿಗಳ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

05:11 PM Aug 30, 2018 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದ ಸಂಬಂಧ ದಲಿತ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳ ಬಂಧನವನ್ನು ಸಂವಿಧಾನ ರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಿತಿಯ ಅಧ್ಯಕ್ಷ ವಿಠ್ಠಲ ದೊಡ್ಮನಿ ಮತ್ತು ಪದಾಧಿಕಾರಿಗಳು ಪ್ರತಿಭಟನೆ ನಡೆಸಿ,
ವಿಚಾರವಾದಿಗಳಾದ ದಾಬೋಲ್ಕರ್‌, ಪನ್ಸಾರೆ, ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಲಪಂಥಿಯ ಸಿದ್ಧಾಂತದ ವ್ಯಕ್ತಿಗಳ ಬಂಧನವಾಗುತ್ತಿದಂತೆ ಕೇಂದ್ರ ಸರ್ಕಾರವು ಭಯಗೊಂಡಂತೆ ಕಾಣುತ್ತಿದೆ.
ಹೀಗಾಗಿ ತನ್ನ ಫ್ಯಾಸಿಸ್ಟ್‌ ದಮನಕಾರಿ ಅಸ್ತ್ರದ ಮೂಲಕ ದೇಶದಲ್ಲಿ ಭಯ ಹುಟ್ಟಿಸುವ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ಮತ್ತು ದಲಿತ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿಸಿದೆ. 

ಸುಳ್ಳು ಪ್ರಕರಣದಡಿ ಸುಧಾ ಭಾರದ್ವಾಜ್‌, ಗೌತಮ ನವಲ, ವರವರರಾವ, ಅರುಣಾ ಮುಂತಾದವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಭೀಮಾ ಕೋರೆಗಾಂವ ವಿಜಯೋತ್ಸವ ಸಂದರ್ಭದಲ್ಲಿ ಹಲ್ಲೆಗೊಳಗಾದ ದಲಿತರ ಪರ ವಾದಿಸುತ್ತಿರುವ ವಕೀಲರನ್ನೂ
ಗುರಿಯಾಗಿಸಿಕೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರದ ನಿರ್ಲಜ್ಜ ಕ್ರೌರ್ಯವಾಗಿದ್ದು, ದೇಶದ ಪ್ರಜಾಪ್ರಭುತ್ವದ ಹಕ್ಕು ಮತ್ತು ನಾಗರಿಕ ಸ್ವಾತಂತ್ರ್ಯಾದ ಮೇಲೆ ನಡೆಸಿದ ದಾಳಿಯಾಗಿದೆ. 

ಮುಂಬರುವ 2019ರ ಚುನಾವಣೆ ಗೆಲ್ಲುವ ವಾಮಮಾರ್ಗ ಇದಾಗಿದ್ದು, ಕೂಡಲೇ ಬಂಧಿತರ ಮೇಲೆ ಪ್ರಕರಣಗಳನ್ನು ಹಿಂಪಡೆದು ಅವರನ್ನು ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.

Advertisement

ಆರ್‌.ಕೆ. ಹುಡಗಿ, ಡಾ| ಪ್ರಭು ಖಾನಾಪುರ, ಲಕ್ಷ್ಮಿಕಾಂತ ಹುಬ್ಬಳ್ಳಿ, ಬಸಣ್ಣ ಸಿಂಗೆ, ಎ.ಬಿ.ಹೊಸಮನಿ, ಸಂತೋಷ
ಮೇಲ್ಮನಿ, ಕೆ.ನೀಲಾ, ಹಣಮಂತ ದೊಡ್ಮನಿ, ಸೋಮಶೇಖರ, ಸುರೇಶ ಮೆಂಗನ, ಅಶ್ವಿ‌ನಿ ಮದನಕರ ಮತ್ತು ಸಂಜೀವ ಮಾಲೆ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next