ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತ ಕಾಂಗ್ರೆಸ್ ಸಮಿತಿ ಹಾಗೂ ನಾಯಕರ ಹಿತರಕ್ಷಣಾ ವೇದಿಕೆ ಸದಸ್ಯರು ನಗರದ ಪ್ರತ್ಯೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು.
ಗೋಲಿಬಾರ್‌ಗೆ ಖಂಡನೆ: ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದ ಮೈಸೂರು ಜಿಲ್ಲಾ ರೈತ ಕಾಂಗ್ರೆಸ್ ಸಮಿತಿ ಸದಸ್ಯರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಮಧ್ಯ ಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಪ್ರಕರಣ ಖಂಡಿಸಿದರು.
ರಾಜ್ಯದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಹೀಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇನ್ನೂ ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡನೀಯವಾಗಿದ್ದು, ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿರುವುದು ಸರಿಯಲ್ಲ.
ಹೀಗಾಗಿ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸತ್ಯನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಮರಿಗೌಡ, ಪುಷ್ಪ ಅಮರ್‌ನಾಥ್, ಸುರೇಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಸಮಗ್ರ ತನಿಖೆಗೆ ಆಗ್ರಹ: ನಗರದ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದ ನಾಯಕರ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು, ತಾಲೂಕಿನ ಉದೂºರು ಗ್ರಾಮದ ಶಂಕರ್ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಪೊಲೀಸ್ ದೌರ್ಜನ್ಯದಿಂದ ಶಂಕರ್ ಮೃತಪಟ್ಟಿದ್ದು, ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ವಿಚಾರಣೆ ನೆಪದಲ್ಲಿ ಆತನನ್ನು ಠಾಣೆಗೆ ಕರೆತಂದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದಾರೆ.
ಇದರಿಂದ ಮನನೊಂದ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವ ಮೂಲಕ ಪೊಲೀಸರ ವಿರುದ್ಧ ಕ್ರಮಕೈ ಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಕೀಲ ಪಡುವಾರಹಳ್ಳಿ ರಾಮಕೃಷ್ಣ, ವೇದಿಕೆ ದ್ಯಾವಪ್ಪನಾಯಕ, ಪ್ರಬಾಕರ ಹುಣಸೂರು, ಶ್ರೀಧರ್ ಚಾಮುಂಡಿಬೆಟ್ಟ, ತಿಮ್ಮನಾಯಕ ಮತ್ತಿತರರು ಪಾಲ್ಗೊಂಡಿದ್ದರು.