ಹುಣಸೂರು: ತಾಲೂಕಿನ ಆಸ್ಪತ್ರೆ-ಉದ್ದೂರು ಕಾವಲ್ ಸೊಸೈಟಿಯ ಎಲ್ಲ ರೈತರಿಗೂ ಸಾಗುವಳಿ ನೀಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರುಕುಮಾರ್, ಸರ್ಕಾರಿ ಜಮೀನು ಒತ್ತುವರಿ ತಡೆಯಬೇಕು, ಸ್ಥಗಿತಗೊಂಡಿದ್ದ ಮೋಜಣಿ ಕಾರ್ಯ ಪುನರಾರಂಭಿಸಬೇಕು,
ಆಸ್ಪತ್ರೆ ಮತ್ತು ಉದ್ದೂರು ಕಾವಲ್ ಸೊಸೈಟಿ ಜಮೀನು ಸಾಗುವಳಿ ನೀಡುವಾಗ ತಾಂತ್ರಿಕ ತೊಂದರೆಯಿಂದ ಕೆಲ ರೈತರ ಹೆಸರು ಕೈಬಿಟ್ಟಿದ್ದು ಮತ್ತೆ ಸೇರ್ಪಡೆಗೊಳಿಸಬೇಕು, ಸಾಗುವಳಿಗೆ ಅರ್ಜಿಸಲ್ಲಿಸಿರುವುದನ್ನು ತಿರಸ್ಕರಿಸಿರುವ ಎಲ್ಲ ಅರ್ಜಿಗಳನ್ನು ಮರು ಪರಿಶೀಲಿಸಿ ಮಂಜೂರು ಮಾಡಬೇಕು ಎಂದರು.
ಒತ್ತುವರಿ ತೆರವುಗೊಳಿಸಿ: ಬೋಳನಹಳ್ಳಿ ಬಳಿ ಲ್ಯಾಡ್ ಡೆವಲಪರ್ ಒತ್ತುವರಿ ಮಾಡಿಕೊಂಡಿರುವ ಜಮೀನು ಹಾಗೂ ತಾಲೂಕಿನ ವಿವಿಧೆಡೆ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ಬಿಡಿಸಿ ಬಡವರಿಗೆ ನಿವೇಶನ ವಿತರಿಸಬೇಕು, ಸಹಕಾರ ಸಂಘಗಳಲ್ಲಿ 50 ಸಾವಿರದ ವರೆಗೆ ಸಾಲ ಮನ್ನಾ ಘೋಷಣೆಯಾಗಿದ್ದರೂ ಕೆಲ ಸಂಘದಲ್ಲಿ ಈವರೆವಿಗೂ ಮನ್ನಾ ಮಾಡಿಲ್ಲ.
ಈ ಬಗ್ಗೆ ಕ್ರಮವಹಿಸಬೇಕು, ಹನಗೋಡು ನಾಲಾ ಭಾಗದಲ್ಲಿ ನೀರು ಬಿಟ್ಟ ನಂತರ ಕಾಮಗಾರಿ ಆರಂಭಿಸುವ ಬದಲಿಗೆ ಮುಂದಿನ ವರ್ಷ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು, ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯನ್ನು ಮತ್ತೆ ಆರಂಭಿಸಿ ಬಡವರ ನೆರವಿಗೆ ಬರಬೇಕು,
ತಾಲೂಕಿನಾದ್ಯಂತ ಮತ್ತೆ ಅಕ್ರಮ ಮದ್ಯದ ಹಾವಳಿ ಆರಂಭವಾಗಿದ್ದು ತಡೆಗಟ್ಟಬೇಕು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಜೆ ವೇಳೆ ಹೆಚ್ಚುವರಿ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದರು. ನಂತರ ಉಪ ವಿಭಾಗಾಧಿಕಾರಿ ನಿತೀಶ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಾರ್ಯದರ್ಶಿ ಶಂಕರೇಗೌಡ, ನಾಗಣ್ಣಾಚಾರ್,ಬಸವರಾಜೇಗೌಡ, ಆಲಿಜಾನ್,ರಾಮಕೃಷ್ಣೇಗೌಡ, ಬಸವರಾಜೇಗೌಡ ಸೇರಿದಂತೆ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.