Advertisement

ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

04:00 PM Jan 05, 2018 | Team Udayavani |

ಶಹಾಪುರ: ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಆರೋಪಿತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಜ. 1ರಂದು ಮಹಾರಾಷ್ಟ್ರದ ಕೋರೆಗಾಂವ್‌ ಗ್ರಾಮದಲ್ಲಿದ್ದ ದಲಿತ ಸೇನೆಯ ವಿಜಯಸ್ಥಂಭದ ದರ್ಶನ ಪಡೆದು ದಲಿತ ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಲು ಪ್ರತಿವರ್ಷದಂತೆ ವಿವಿಧಡೆಯಿಂದ ಜನ ಸೇರಿದ್ದರು. ಆದರೆ ಅಲ್ಲಿ ಸೇರಿದ್ದ ದಲಿತರ ಮೇಲೆ ದಾಂಧಲೆ ನಡೆಸಿ ಮಾರಣಾಂತಿಕ ಹಲ್ಲೆ ನಡೆದಿದೆ. ಕೋಮು ಗಲಭೆಗೆ ಒಳಗಾದ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಆಗ್ರಹಿಸಿದರು. ಗಲಭೆಕೋರರ ವಿರುದ್ಧ ಕೂಡಲೇ ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮುಂಚಿತವಾಗಿ ನಗರದ ಸಿಬಿ ಕಮಾನದಿಂದ ಬಸವೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಜರುಗಿತು. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ತಳವಾರ, ಸಯ್ಯದ್‌ ಖಾಲಿದ್‌, ಶಿವಪುತ್ರ ಜವಳಿ, ರಾಮಣ್ಣ ಸಾದ್ಯಾಪುರ,  ಸಯ್ಯದ್‌ ಖಾದ್ರಿ, ಶರಣು ದೋರನಹಳ್ಳಿ, ಅಜಯ್‌ ಯಳಸಂಗಿಕರ್‌, ಮರೆಪ್ಪ ಕನ್ಯಾ ಕೋಳೂರ, ರಾಯಪ್ಪ ಸಾಲಿಮನಿ ಹಾರಣಗೇರ, ಈರಣ್ಣ ಕಸನ್‌ ಸೇರಿದಂತೆ ದಸಂಸ ಮತ್ತು ಎಸ್‌ಡಿಪಿಐ ಸಂಘಟನೆಗಳ ಕಾರ್ಯಕರ್ತರ ಭಾಗವಹಿಸಿದ್ದರು. 

ಡಿಎಸ್‌ಪಿ ಪಾಂಡುರಂಗ, ನಗರ ಸಿಪಿಐ ನಾಗರಾಜ, ಗ್ರಾಮೀಣ ಸಿಪಿಐ ಮಹ್ಮದ್‌ ಸಿರಾಜ್‌ ಹಾಗೂ ಪಿಎಸ್‌ಐ ಸತೀಶ ಮೂಲಿಮನಿ, ಗೋಗಿ ಪಿಎಸ್‌ಐ ಕೃಷ್ಣಾ ಸುಬೇದಾರ, ಭೀ. ಗುಡಿ ಪಿಎಸ್‌ಐ ತಿಪ್ಪಣ್ಣ ರಾಠೊಡ ಹಾಗೂ ಪೊಲೀಸ್‌ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next