ಸಾಗರ: ತಾಲೂಕಿನ ಬ್ಯಾಕೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಅತ್ಯಂತ ಬರ್ಬರವಾಗಿ ಹತ್ಯೆಗೀಡಾಗಿದ್ದ 80 ವರ್ಷದ ಸುಂದರ್ ಶೇಟ್ ಮತ್ತು 70 ವರ್ಷದ ಸುಲೋಚನಾ ಶೇಟ್ ದಂಪತಿಗಳ ಕೊಲೆ ರಹಸ್ಯ ಬೇಧಿಸದ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಸೆ. 21ರಂದು ಬ್ಯಾಕೋಡು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬ್ಯಾಕೋಡಿನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿ ಪ್ರತಿಭಟನಾ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು, ಸುಂದರ್ ಶೇಟ್ ದಂಪತಿಗಳ ಕೊಲೆ ನಡೆದು ಎರಡು ವರ್ಷವಾಯಿತು. ಪೊಲೀಸರು ಹಲವು ಅಯಾಮಗಳಲ್ಲಿ ತನಿಖೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಈತನಕ ಹತ್ಯೆ ಮಾಡಿದವರನ್ನು ಬಂಧಿಸುವ ಕೆಲಸ ಮಾಡದೆ ಇರುವುದು ಖಂಡನೀಯ. ಕೊಲೆಗಾರರನ್ನು ಹಿಡಿಯಲು ಪೊಲೀಸರಿಗೆ ಯಾವ ಅಡೆತಡೆ ಇದೆ ಎನ್ನುವುದು ಗೊತ್ತಾಗುತ್ತಿಲ್ಲ. ಸುಂದರ್ ಶೇಟ್ ಮಕ್ಕಳು ಹತ್ಯೆ ಮಾಡಿದವರನ್ನು ಪತ್ತೆ ಮಾಡದ ಪೊಲೀಸರ ವಿರುದ್ಧ ಹೋರಾಟಕ್ಕೆ ನಮ್ಮಲ್ಲಿ ನೈತಿಕ ಬೆಂಬಲ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆ ನಡೆಸಿ ಹಕ್ಕೊತ್ತಾಯದ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಕೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಬೊಬ್ಬಿಗೆ ಮಾತನಾಡಿ, ಸುಂದರ್ ಶೇಟ್ ಮತ್ತು ಸುಲೋಚನಾ ಶೇಟ್ ದಂಪತಿಗಳ ಹತ್ಯೆ ಮಾಡಿದವರನ್ನು ಬಂಧಿಸದೆ ಇರುವ ಪೊಲೀಸರ ಕ್ರಮವನ್ನು ಖಂಡಿಸಿ ಸೆ. ೨೧ರಂದು ಬ್ಯಾಕೋಡು ಪೊಲೀಸ್ ಠಾಣೆ ಎದುರು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರೂರು ಹೋಬಳಿಯಲ್ಲಿ ಎರಡು ಮೂರು ತಿಂಗಳ ಹಿಂದೆ ಕೆಲವು ಕಡೆಗಳಲ್ಲಿ ಕಳ್ಳತನ ನಡೆದಿದೆ. ಈ ಪ್ರಕರಣವನ್ನು ಸಹ ಪೊಲೀಸರು ಬೇಧಿಸಿಲ್ಲ. ಒಟ್ಟಾರೆ ಜನರು ಆತಂಕದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪಾಲ್ಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹರೀಶ್ ಗಂಟೆ, ಪ್ರಮುಖರಾದ ದೇವರಾಜ್, ಜಿನೇಂದ್ರ ಜೈನ್, ಕೃಷ್ಣ ಭಂಡಾರಿ, ವಿನಾಯಕ್ ಶೇಟ್, ಮಂಜುನಾಥ ಶೇಟ್, ಸುಚಿನ್ ಜೈನ್ ಇನ್ನಿತರರು ಹಾಜರಿದ್ದರು.