ಹುಣಸೂರು: ಹುಣಸೂರಿನಿಂದ ಮೈಸೂರಿಗೆ ಬೆಳಗ್ಗೆ ವೇಳೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಿಲ್ದಾಣದಲ್ಲಿ ಕಾದು ಹೈರಾಣಾದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿಲ್ದಾಣದಲ್ಲೇ ಪ್ರತಿಭಟಿಸಿದರು.
ಬೆಳಗ್ಗೆ 6.30ರಿಂದಲೇ ಮೈಸೂರಿಗೆ ತೆರಳಲು ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರು. ಕೊಡಗು, ಮಂಗಳೂರು ಕಡೆಯಿಂದ ಬೆರಳೆಣಿಕೆಯಷ್ಟು ಬಸ್‌ಗಳು ಅಲ್ಲಿಂದಲೇ ಭರ್ತಿಯಾಗಿ ಬಂದವು. 7.30 ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದರು. ಆದರೆ, ಬಸ್‌ಗಳು ಮಾತ್ರ ವಿರಳವಾಗಿದ್ದರಿಂದ ಬರುತ್ತಿದ್ದ ಬಸ್‌ಗಳಿಗೆ ಹತ್ತಲು ಪ್ರಯಾಣಿಕರು ಮುಗಿಬಿದ್ದರು.
ಇತ್ತ ಬಸ್ ವ್ಯವಸ್ಥೆಗೆ ಪ್ರಯಾಣಿಕರು ಒತ್ತಾಯಿಸಿದರೂ ಹೆಚ್ಚಿನ ಬಸ್ ಬರಲಿಲ್ಲ, ಡಿಪೋ ಮ್ಯಾನೇಜರ್‌ಗೆ ವಿಷಯ ತಿಳಿದರೂ ನಿಲ್ದಾಣಕ್ಕೆ ಆಗಮಿಸಲಿಲ್ಲ. ಸಮಯ 8 ಗಂಟೆ ಮೀರುತ್ತಿದ್ದಂತೆ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಸಹನೆ ಕಟ್ಟೆಯೊಡೆದು ಒಂದೆರಡು ಬಸ್‌ಗಳನ್ನು ತಡೆದು ನಿಲ್ಲಿಸಿ, ಇಲಾಖೆಗೆ ಬಿಸಿ ಮುಟ್ಟಿಸಿದರು. ಕೂಡಲೇ ನಗರ ಠಾಣೆ ಎಸ್‌ಐ ಮಹೇಶ್ ನಿಲ್ದಾಣಕ್ಕೆ ಧಾವಿಸಿ, ಬಸ್ ತಡೆದವರನ್ನು ತರಾಟೆ ತೆಗೆದುಕೊಂಡು, ಬಸ್ ಇಲ್ಲದಿದ್ದರೆ ನಮಗೆ ತಿಳಿಸಿ, ನಾವೇ ವ್ಯವಸ್ಥೆ ಮಾಡಿಸುತ್ತೇವೆಂದು ತರಾಟೆಗೆ ತೆಗೆದುಕೊಂಡರು.
ಹುಣಸೂರು ಡಿಪೋದ 20ಕ್ಕೂ ಹೆಚ್ಚು ಕಂಡಕ್ಟರ್‌ಗಳನ್ನು ವಿವಿಧ ಕಾರಣಗಳಿಂದ ಅಮಾನತ್ತುಗೊಳಿಸಲಾಗಿದೆ. ಮಹದೇಶ್ವರ ಬೆಟ್ಟ ಮತ್ತು ದಸರಾಕ್ಕೆ ಹುಣಸೂರು ಡಿಪೋದಿಂದ ಅನೇಕ ಬಸ್‌ಗಳನ್ನು ಕಳುಹಿಸಲಾಗಿದ್ದು, ಅಲ್ಲದೆ ಮೈಸೂರು ಕಡೆಗಷ್ಟೆ ಅಲ್ಲ, ಕೆ.ಆರ್.ನಗರ ಮತ್ತಿತರ ಹಳ್ಳಿಗಳ ಕಡೆಗೂ ಬಸ್ ವ್ಯವಸ್ಥೆ ಸರಿಯಾಗಿರಲಿಲ್ಲ. ಆದರೂ ಸಮರ್ಪಕ ಬಸ್ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ.
ಮೈಸೂರಿಗೆ ಸಕಾಲದಲ್ಲಿ ಬಸ್ ಇಲ್ಲದೆ ನಿತ್ಯಬೆಳಗ್ಗೆ ನಿಂತುಕೊಂಡು ಹೋಗಬೇಕಿದೆ. ಹಲವಾರು ಬಾರಿ ತರಗತಿಗಳಿಗೆ ಗೈರಾಗಿದ್ದೇವೆ. ಇಲ್ಲಿನ ಡಿಪೋ ಮ್ಯಾನೇಜರ್‌ಗೆ ಸಮಸ್ಯೆ ಅರಿವಿದ್ದರೂ ಕ್ರಮ ವಹಿಸುತ್ತಿಲ್ಲ, ಯಾವ ಜನಪ್ರತಿನಿಧಿಗಳೂ ಗಮನ ಹರಿಸುತ್ತಿಲ್ಲ, ಪ್ರತಿಭಟಿಸಿದರೆ ಪೊಲೀಸರು ನಮ್ಮನ್ನೇ ಬೆದರಿಸುತ್ತಾರೆ. ಈಗಲಾದರೂ ಸಾರಿಗೆ ಸಚಿವರು, ಜಿಲ್ಲಾಧಿಕಾರಿಗಳು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.