Advertisement

ಜನವಸತಿಯಿಂದ ತ್ಯಾಜ್ಯಘಟಕ ದೂರವಿರಿಸಿ : ಬೆಳ್ನಿ ಗ್ರಾಮಸ್ಥರ ಹಠಾತ್‌ ಪ್ರತಿಭಟನೆ

08:30 PM Jan 12, 2022 | Team Udayavani |

ಭಟ್ಕಳ: ಬೆಳ್ನಿಯಲ್ಲಿ ಮಾವಿನಕುರ್ವೆ ಗ್ರಾಮ ಪಂಚಾಯತ್‌ನ ಘನ ತ್ಯಾಜ್ಯ ಘಟಕದ ಕಾಮಗಾರಿಗೆ ಪೊಲೀಸ್‌ ಬಲದೊಂದಿಗೆ ಬಂದಿದ್ದ ಗುತ್ತಿಗೆದಾರರನ್ನು ಊರಿನ ನಾಗರೀಕರು ಪ್ರತಿಭಟನೆ ನಡೆಸಿ ವಾಪಸ್‌ ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆಯಿತು.

Advertisement

ಮಾವಿನಕುರ್ವೆ ಗ್ರಾಪಂಗೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಳ್ನಿಯಲ್ಲಿರುವ ಜನ ವಸತಿ ಪ್ರದೇಶದಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ಈ ಹಿಂದೆಯೇ ಜನರು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಜನ ವಸತಿ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವುದರಿಂದ ತೀವ್ರ ತೊಂದರೆಯಾಗಲಿದೆ, ಕುಡಿಯುವ ನೀರಿನ ಬಾವಿಗಳು ಹಾಳಾಗಲಿವೆ ಎಂದು ಮನವಿ ಸಲ್ಲಿಸಲಾಗಿತ್ತು.

ಆದರೂ ಸಹ ಮಾವಿನಕುರ್ವೆ ಗ್ರಾಪಂನಿಂದ ಬೆಳ್ನಿಯ ಸರ್ವೇ ನಂ. 111ರಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಲು ಉದ್ದೇಶಿಸಿ ಕಾಮಗಾರಿ ಆರಂಭಕ್ಕೆ ಪೊಲೀಸ್‌ ನೆರವಿನಿಂದ ಬಂದಾಗ ಜನರು ಪ್ರತಿಭಟಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸಹಾಯಕ ಆಯುಕ್ತರು ಪರಿಶೀಲಿಸುವ ಭರವಸೆ ನೀಡಿದ್ದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಪಂಚಾಯತ್‌ ಅಧ್ಯಕ್ಷರು, ಸದಸ್ಯರ ಹಾಗೂ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮುಖಂಡ ವಿಠಲ್‌ ನಾಯ್ಕ, ಬೆಳಿ°ಯಲ್ಲಿ ಕಸ ವಿಲೇವಾರಿ ಘಟಕ ನಡೆಸುವುದಕ್ಕೆ ಹಿಂದಿನಿಂದಲೂ
ಗ್ರಾಮಸ್ಥರ ವಿರೋಧವಿದೆ. ಈ ಬಗ್ಗೆ ಗ್ರಾಮಸ್ಥರು ಮನವಿ ಕೂಡ ಸಲ್ಲಿಸಿದ್ದಾರೆ. ಘನತ್ಯಾಜ್ಯ ಘಟಕವನ್ನು ಬೆಳ್ನಿಯಲ್ಲಿ ಮಾಡುವುದಕ್ಕಿಂತ ಯಾವುದಾದರೂ ಸೂಕ್ತ ಸ್ಥಳದಲ್ಲಿ ಪಂಚಾಯತ್‌ನವರು ಮಾಡಲು ಮುಂದಾಗಬೇಕು. ಇಂದು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಆದಷ್ಟು ಶೀಘ್ರದಲ್ಲಿ ಬೇರೆಡೆಗೆ ಘನತ್ಯಾಜ್ಯ ಘಟಕವನ್ನು ಸ್ಥಳಾಂತರಿಸಬೇಕು.
ಮತ್ತೆ ಇಲ್ಲಿ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿ ಮಾವಿನಕುರ್ವೆ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಗೊಂಡ, ಬೆಳ್ನಿಯಲ್ಲಿ ಸರಕಾರದಿಂದ ಘನತ್ಯಾಜ್ಯ ಘಟಕಕ್ಕೆ ಹಣ ಮಂಜೂರಿಯಾಗಿದೆ. ಇಲ್ಲಿ ಒಣಕಸ ಹೊರತುಪಡಿಸಿ ಯಾವುದೇ ರೀತಿಯ ಹಸಿಕಸ ಸಂಗ್ರಹಿಸಿ ಹಾಕುವುದಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಸಮಜಾಯಿಸಿದರು. ಸಾರ್ವಜನಿಕರು ಬೆಳ್ನಿಯಲ್ಲಿ ಯಾವುದೇ ಕಾರಣಕ್ಕೂ ತ್ಯಾಜ್ಯವಿಲೇವಾರಿ ಘಟಕ ನಿರ್ಮಿಸುವುದು ಬೇಡ. ಒಂದೊಮ್ಮೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಕಾಮಗಾರಿ ಆರಂಭಿಸಿದರೆ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next