Advertisement

ಯುಪಿಯಲ್ಲಿ ಯುವತಿ ಅತ್ಯಾಚಾರ ಖಂಡಿಸಿ ಸರಣಿ ನಿರಶನ

03:46 PM Oct 04, 2020 | Suhan S |

ಕಲಬುರಗಿ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಮತ್ತು ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಶನಿವಾರ ನಗರದ ಜಿಲ್ಲಾಧಿಕಾರಿಗಳ ಮುಂದೆ ಜೆಡಿಎಸ್‌ ಪಕ್ಷ ಸೇರಿ ವಿವಿಧ ಸಂಘಟನೆಗಳಿಂದ ಸರಣಿ ಪ್ರತಿಭಟನೆಗಳು ನಡೆದವು.

Advertisement

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಜಂಗಲ್‌ ರಾಜ್‌ ಉದ್ಭವಿಸಿದೆ. ಹಾಡಹಗಲೇ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿದ್ದರೂ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಂಡು ಕಾಣದಂತೆ ಕುಳಿತಿರುವುದು ದುರದೃಷ್ಟಕರವಾದ ವಿಷಯ ಎಂದು ಜಿಲ್ಲಾ ಜೆಡಿಎಸ್‌ ಮುಖಂಡರು ಅಸಮಾಧಾನ ವ್ಯಕಪಡಿಸಿದರು.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ  ಬಂದಾಗಿನಿಂದಲೂ ದಲಿತರ ಮೇಲೆ ಅನ್ಯಾಯ, ಅತ್ಯಾಚಾರ ಹೆಚ್ಚಾಗಿವೆ. ಗೋ ಹತ್ಯೆ ಮತ್ತು ಕ್ರಿಕೆಟ್‌ ಆಟಗಾರರು, ಸಿನಿಮಾ ನಟ-ನಟಿಯವರ ಯಾವುದೇ ವಿಚಾರವಾಗಿ ಪ್ರಧಾನಿ ಮೋದಿ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ದಲಿತ ಯುವತಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿದರೂ ಮೋದಿ ಒಂದೇ ಒಂದು ಮಾತನಾಡಿಲ್ಲ. ದಲಿತರಿಗೆ ಆದ ಅನ್ಯಾಯ ಸರಿಪಡಿಸಲು ಅವರು ಮುಂದೆ ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಹತ್ರಾಸ್‌ ಜಿಲ್ಲೆಯ ಯುವತಿ ಮೇಲಿನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ, ಮಹಾಪ್ರಧಾನ ಕಾರ್ಯದರ್ಶಿ ಶ್ಯಾಮರಾವ ಸೂರನ್‌, ಮುಖಂಡರಾದ ಮನೋಹರ ಪೋದ್ದಾರ, ಎಂಡಿ ಅಲಿಮೋದ್ದಿನ್‌ ಇನಾಮದಾರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಎಸ್‌ಪಿ ಆಕ್ರೋಶ: ಹತ್ರಾಸ್‌ ಜಿಲ್ಲೆಯ ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಂಪೂರ್ಣ ವಿಫಲರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕೆಂದು ಬಹುಜನ ಸಮಾಜ ಪಕ್ಷದ ಜಲ್ಲಾ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ಮಹಾದೇವ ಧನ್ನಿ, ರಾಮಚಂದ್ರ ಝಂಡೇ, ಮಲ್ಲಿಕಾರ್ಜುನ  ಕೊಡ್ಲಿ, ಅಸ್ಲಾಂ ಪಟೇಲ್‌ ಕೊಳ್ಳೂರ, ಮೈಲಾರಿ ಶೆಳ್ಳಗಿ ಭಾಗವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಒಕ್ಕೂಟ: ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣ ಸಂವಿಧಾನದಆಶಯಗಳನ್ನು ಹೊಸಕಿ ಹಾಕಿದಂತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಮುಖಂಡರು ಧರಣಿ ಕುಳಿತಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಬಡವರು, ದಲಿತರು, ಆದಿವಾಸಿಗಳು ಬೀದಿಯಲ್ಲಿ ಕೊಲೆಯಾಗುವಂತೆ ಆಗಿದೆ. ಮಹಿಳೆಯರು ಮತ್ತು ಮಕ್ಕಳು ನಿರಂತರವಾಗಿ ಅತ್ಯಾಚಾರ,ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದ ಧರಣಿ ನಿರತ ಅರ್ಜುನ ಭದ್ರೆ, ಮಹಾದೇವ ಕೋಳಕೂರ, ಮರೆಪ್ಪ ಮೇತ್ರಿ, ಭೀಮಶ್ಯ ಖನ್ನಾ, ರಮೇಶ ಕವಡೆ, ಮಲ್ಲಿಕಾರ್ಜುನ ಖನ್ನಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು ಸರ್ಕಾರದಿಂದ ವರದಿ ತರಿಸಿಕೊಂಡು ಕ್ರಮ ಜರುಗಿಸಬೇಕೆಂದು ಮುಖಂಡರಾದ ಶಿವಪ್ಪ ಬಿಲಗುಂದಿ, ಮಡಿವಾಳಪ್ಪ ನಿಂಬರಗಿ, ಹಣಮಂತರಾಯ ಮಾಡಗೇರಿ, ಸೋನುಬಾಯಿ ಶೃಂಗೇರಿ, ಸೀಮಾ ಹಡಗಿಲ್‌ ಆಗ್ರಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next