Advertisement

ಶೌಚಾಲಯ ತೆರವು ಖಂಡಿಸಿ ಪ್ರತಿಭಟನೆ

12:27 PM Sep 09, 2017 | Team Udayavani |

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕಲ್ಮೇಶ್ವರ ನಗರ ಹಾಗೂ ಕುರುಬರ ಓಣಿಯಲ್ಲಿ ಸಾರ್ವಜನಿಕ ಶೌಚಾಲಯ ತೆರವುಗೊಳಿಸಿದ ಪಾಲಿಕೆ ಕ್ರಮ ಖಂಡಿಸಿ ಸ್ಥಳೀಯರು ವಲಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಯಾವುದೇ ಮುನ್ಸೂಚನೆ ನೀಡದೇ 60 ಹಾಗೂ 64ನೇ ವಾರ್ಡ್‌ ವ್ಯಾಪ್ತಿಯ ಕಲ್ಮೇಶ್ವರ ನಗರ ಹಾಗೂ ಕುರುಬರ ಓಣಿ ಜನರ ಬಳಕೆಗೆ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

Advertisement

ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು, ಕೂಡಲೇ ಮರು ನಿರ್ಮಾಣ ಮಾಡಿಕೊಡಬೇಕು. ನಿರ್ಮಾಣ ಆಗುವವರೆಗೂ ಮೊಬೈಲ್‌ ಶೌಚಾಲಯದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ನಗರದಲ್ಲಿ ಸಾಕಷ್ಟು ಸರಕಾರಿ ಜಾಗ ಒತ್ತುವರಿಯಾಗಿದೆ.

ಅತಿ‌ಕ್ರಮಣ ತೆರವಿಗೆ ನ್ಯಾಯಾಲಯ ಆದೇಶ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಅತಿಕ್ರಮಣದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈ ಭಾಗದ ಜನರ ಬಳಕೆಗೆ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವನ್ನು ಬೆಳಗಿನ ಜಾವ ಏಕಾಏಕಿ ತೆರವುಗೊಳಿಸಿದ್ದು ಸರಿಯಲ್ಲ.

ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ತೆರವುಗೊಳಿಸಿದ ಶೌಚಾಲಯದ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

ಸ್ಥಳಕ್ಕೆ ಬಿಜೆಪಿ ನಾಯಕರು ಆಗಮಿಸಿದ ನಂತರ ಪ್ರತಿಭಟನೆ 11 ನೇ ವಲಯ ಕಚೇರಿಗೆ ಸ್ಥಳಾಂತರಗೊಂಡಿತು. ರಂಗಾ ಬದ್ದಿ, ಸಂತೋಷ ಅರಕೇರಿ, ಹನುಮಂತಪ್ಪ ದೊಡ್ಡಮನಿ, ಗೋಪಾಲ ಬದ್ದಿ, ಸುರೇಶ ಮಟ್ಟೆಣ್ಣನವರ, ಮಂಜು ಮುನವಳ್ಳಿ, ಶಿವು ಕೊತಬಾಳ,  ಶಿವು ಕಡ್ಡಿ, ರಾಜು ಗೌಳಿ, ಮೈಲಾರಿ ಕೋಪನೂರ, ಗುರು ಕುರಿಯವರ, ಸಿದ್ದಪ್ಪ ಮಿಶಾಳ, ನವೀನ ಮುನವಳ್ಳಿ, ರವಿ ರಾಯಪ್ಪನವರ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next