ಬೆಂಗಳೂರು: ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿ ಸಿಟಿಜನ್ ಫಾರ್ ಬೆಂಗಳೂರು ಫೋರಂ ವತಿಯಿಂದ ಮಾ.16ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಪೂರ್ಣಗೊಳ್ಳಬೇಕಾದರೆ 3 ಸಾವಿರಕ್ಕೂ ಅಧಿಕ ಮರಗಳನ್ನು ಬಲಿಕೊಡಬೇಕಾಗುತ್ತದೆ.
ಪ್ರಮುಖ ಕೆರೆಗಳ ಒತ್ತುವರಿಯಾಗುತ್ತವೆ ಹೀಗಾಗಿ ರಾಜ್ಯ ಸರ್ಕಾರ ಎಲಿವೇಟೆಡ್ ಕಾರಿಡಾರ್ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಶನಿವಾರ ಮೌರ್ಯ ವೃತ್ತದ ಬಳಿ ಬೆಳಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಿಟಿಜನ್ ಫಾರ್ ಬೆಂಗಳೂರು ಫೋರಂನ ತಾರಾ ಕೃಷ್ಣಸ್ವಾಮಿ ತಿಳಿಸಿದರು.
ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆ ಕಡೆಗೆ ಹೆಚ್ಚು ಗಮನ ನೀಡಬೇಕು. ಉಪನಗರ ರೈಲು, ಬಸ್ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲು ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಬೇಕು. “ಕಾಂಕ್ರೀಟ್ ಸಾಕು, ಸಮೂಹ ಸಾರಿಗೆ ಬೇಕು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಆಗ್ರಹಿಸಿದರು.
ಈ ಯೋಜನೆಯಿಂದ ಕಬ್ಬನ್ ಉದ್ಯಾನವನದಲ್ಲಿ 120 ಮರಗಳು, ಜಯಮಹಲ್ ಪ್ಯಾಲೇಸ್‌ನಲ್ಲಿ 356 ಮರಗಳು, ಕೋಲ್ಸ್ ಪಾರ್ಕ್‌ನಲ್ಲಿ 47 ಮರಗಳು, ಐಐಎಸ್‌ಸಿ ಕ್ಯಾಂಪಸ್ ಹಾಗೂ ಸಿ.ವಿ.ರಾಮನ್ ರಸ್ತೆಯಲ್ಲಿ 195 ಮರಗಳು ಮತ್ತು ರಾಜಾರಾಮ್ ಮೋಹನ್‌ರಾಯ್ ರಸ್ತೆಯಲ್ಲಿ 108 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಿಳಿಸಿದರು.
ಹೆಬ್ಟಾಳ ಕೆರೆ, ಹಲಸೂರು ಕೆರೆ, ವರ್ತೂರು ಕೆರೆ ಮತ್ತು ವೃಷಾಭವತಿ ಕೆರೆಯ 5 ಮೀಟರ್ ವ್ಯಾಪ್ತಿ, ಕೆ.ಆರ್.ಪುರ ಕೆರೆ ಮತ್ತು ಸರ್ವಜ್ಞನಗರ ಕೆರೆಯ 20 ಮೀಟರ್ ವ್ಯಾಪ್ತಿ, ಅಗರ ಕೆರೆ ಮತ್ತು ಚಳ್ಳಕೆರೆಯ 30 ಮೀಟರ್ ವ್ಯಾಪ್ತಿ, ಬಾಣಸವಾಡಿ ರಾಜಕಾಲುವೆ ಹಾಗೂ ಶಾಂತಿನಗರ ರಾಜಕಾಲುವೆಯ 1 ಮೀಟರ್ ವ್ಯಾಪ್ತಿ ಯೋಜನೆಗೆ ಬಲಿಯಾಗಲಿದೆ ಎಂದು ಮಾಹಿತಿ ನೀಡಿದರು.
ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ಕಾವೇರಿ ನೀರು ಸರಬರಾಜು ಮಾಡುವಾಗ ಶೇ.48ರಷ್ಟು ನೀರು ಪೋಲಾಗುತ್ತದೆ. ಅದನ್ನು ತಡೆಯಲು 26 ಸಾವಿರ ಕೋಟಿ ರೂ. ಅಗತ್ಯವಿದೆ. ನಗರದ ಮೂಲ ಸೌಕರ್ಯದ ಸಮಸ್ಯೆ ನಿವಾರಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಶ್ರೀಮಂತರ ಪರವಾಗಿರುವ ಎಲಿವೇಟೆಡ್ ಕಾರಿಡಾರ್ ಯೋಜನೆ ರೂಪಿಸಲು ಸರ್ಕಾರದ ಬಳಿ 35 ಸಾವಿರ ಕೋಟಿ ರೂ. ಹಣ ಇದೆ ಎಂದು ಟೀಕಿಸಿದರು.