ಹಾಸನ: ಕಳಪೆ ಆಹಾರ ಹಾಗೂ ಮೂಲ ಸೌಕರ್ಯ ಕೊರತೆ ಖಂಡಿಸಿ ಜಿಲ್ಲಾ ಕ್ರೀಡಾಂಗಣದ ಸಮೀಪ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟಿಸಿದರು.
ಸಮಾಜ ಕಲ್ಯಾಣ ಇಲಾಖೆ ನಡೆಸುವ ಹಾಸ್ಟೆಲ್ ವಿದ್ಯಾರ್ಥಿಗಳು ಕಳಪೆ ಅಹಾರ ಮುಂದಿಟ್ಟು, ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು. ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವಂತೆ ಹಲವು ಬಾರಿ ವಾರ್ಡ್‌ನ್ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಮಸ್ಯೆಯ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಮತ್ತು ಮಧ್ಯಾಹ್ನದ ವೇಳೆ ಊಟ ಚೆನ್ನಾಗಿರುವುದಿಲ್ಲ. ಅಡುಗೆಗೆ ಕೊಳೆತ ತರಕಾರಿ ಬಳಸಲಾಗುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ಮಲಗಲು ಮಂಚವಿಲ್ಲದೆ ನೆಲೆದ ಮೇಲೆಯೇ ಮಲಗುವ ಅನಿವಾರ್ಯ ಸ್ಥಿತಿ ಇದೆ. ಗ್ರಂಥಾಲಯದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳಿಲ್ಲ. ಅಗತ್ಯ ಸೌಲಭ್ಯ ನೀಡುವ ಬದಲು ವಿದ್ಯಾರ್ಥಿ ನಿಲಯಕ್ಕೆ ಕಾರು ಹಾಗೂ ಬೈಕ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುಪಾಲು ವಿದ್ಯಾರ್ಥಿ ನಿಲಯಗಳಲ್ಲಿ ಇದೇ ರೀತಿಯ ಅವ್ಯಸ್ಥೆ ಇದೆ. ಬೇರೆ ಯಾವುದೇ ಜಿಲ್ಲೆಯಲ್ಲಿ ಈ ರೀತಿಯ ಅವ್ಯವಸ್ತೆ ಇಲ್ಲ. ಗುರುವಾರ ರಾತ್ರಿಯಿಂದಲೂ ನಿತಂತರವಾಗಿ ಪ್ರತಿಭಟನೆ ಮಾಡಲಾಗುತಿದ್ದೇವೆ. ಆದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಮೂಲ ಸೌಕರ್ಯ ಒದಗಿಸಲು ಮುಂದಾಗದಿದ್ದರೆ, ಜಿಲ್ಲಾಧಿಕಾರಿ ಮತ್ತು ಜಿಪಂ ಕಚೇರಿ ಎದುರು ಜಿಲ್ಲೆಯ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಭೇಟಿಯಾದ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎನ್.ಸತೀಶ್ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಇನ್ನು ಮೂರು ದಿನಗಳ ಒಳಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂತೆಗೆದುಕೊಂಡರು. ವಿದ್ಯಾರ್ಥಿಗಳಾದ ಲೋಕೇಶ್, ಪೃಥ್ವಿ, ರವೀಂದ್ರ ಚೌಹಾಣ್, ರಘುನಾಯಕ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.