ಬೆಂಗಳೂರು/ಉಡುಪಿ : ಶ್ರೀಕೃಷ್ಣಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ವೇಳೆ ನಮಾಜ್ ಮಾಡಿದ್ದನ್ನು ವಿರೋಧಿಸಿ, ಪೇಜಾವರ ಪರ್ಯಾಯ ಮಠಾಧೀಶ ವಿಶ್ವೇಶ ತೀರ್ಥ ಶ್ರೀಗಳು ಸಮರ್ಥಿಸಿ ನೀಡಿದ ಕೆಲ ಹೇಳಿಕೆಗಳನ್ನು ವಿರೋಧಿಸಿ ರಾಜ್ಯಾಧ್ಯಂತ ಭಾನುವಾರ ಶ್ರೀರಾಮ ಸೇನೆ , ಹಿಂದೂ ಜನ ಜಾಗೃತಿ ಸಮಿತಿ ಮತ್ತು ಹಿಂದೂ ಮಹಾ ಸಭಾ ಪ್ರತಿಭಟನೆ ನಡೆಸಿದೆ.
ಉಡುಪಿಯ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಸಿ ಶ್ರೀಗಳ ಹೇಳಿಕೆಯನ್ನು ಮತ್ತು ಮಠದಲ್ಲಿ ನಮಾಜ್ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ವೇಳೆ ಭಜನೆಯನ್ನೂ ಮಾಡಲಾಯಿತು.
ಮಂಗಳೂರಿನ ಲಾಲ್‌ಬಾಗ್‌ನಲ್ಲೂ ಪ್ರತಿಭಟನೆ ನಡೆಸಲಾಗಿದೆ. ನೂರಾರು ಶ್ರೀರಾಮಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿ ಪೇಜಾವರ ಶ್ರೀಗಳು ಗೌರವಾನ್ವಿತರು, ಪೂಜ್ಯ ಶ್ರೀಗಳು. ಅವರ ವಿರುದ್ಧ ನಮ್ಮ ಪ್ರತಿಭಟನೆಯಲ್ಲ. ಅವರು ತೆಗೆದುಕೊಂಡ ನಿರ್ಧಾರದ ವಿರುದ್ಧ ಪ್ರತಿಭಟನೆ. ಸೌಹಾರ್ದ ಕೂಟದ ವಿರೋಧಿ ಪ್ರತಿಭಟನೆಯಲ್ಲ. ಸೌಹಾರ್ದಕ್ಕೆ ಬಳಸಿಕೊಂಡ ಸ್ಥಳದ ಬಗ್ಗೆ ಪ್ರತಿಭಟನೆ. ಸಮಸ್ತ ಹಿಂದೂ ಸಮಾಜಕ್ಕೆ ಅವಮಾನ ಆಗಿದೆ ಎಂದರು.
ಹುಬ್ಬಳ್ಳಿ ,ಬೆಳಗಾವಿ ,ಕಲಬುರಗಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು.
ಚಿತ್ರಗಳು:ಆಸ್ಟ್ರೋ ಮೋಹನ್