ಮೈಸೂರು: ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತಿ ಚಿತ್ರ ಬಿಡುಗಡೆಗೆ ವಿರೋಧಿಸಿ ಶ್ರೀ ಮಹಾರಾಣಾ ಪ್ರತಾಪ್ ಸಿಂಗ್‌ಜೀ ರಜಪೂತ್ ಕ್ಷತ್ರಿಯ ಸಮಾಜ್ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮಹಾರಾಣಿ ಪದ್ಮಾವತಿ ಅವರು ಇಡೀ ಭಾರತಕ್ಕೆ ಹೆಮ್ಮೆ, ಶೌರ್ಯ, ಸಾಹಸಗಳಲ್ಲದೇ ತ್ಯಾಗ ಹಾಗೂ ಜೀವನ ಮೌಲ್ಯಗಳನ್ನು ಮೆರೆದು ದೇಶದಲ್ಲೇ ಮನೆ ಮಾತಾಗಿರುವವರು.
ಇವರ ಬಗ್ಗೆ ಚಿತ್ರ ಮಾಡುವುದು ಒಳ್ಳೆಯದೇ, ಆದರೆ, ಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ತೋರಿಸಲು ಹೊರಟಿರುವುದು ನಿಜಕ್ಕೂ ಬೇಸರದ ಸಂಗತಿ ಮತ್ತು ಅತ್ಯಂತ ಖಂಡನೀಯ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತಿ ಚಿತ್ರದಲ್ಲಿ ರಜಪೂತ್ ಜನಾಂಗದ ಪ್ರತೀಕವಾಗಿರುವ ಆತ್ಮಾಭಿಮಾನದ ಸಂಕೇತವಾದ ಅಪೂರ್ವ ಸೌಂದರ್ಯವತಿ ರಾಣಿ ಪದ್ಮಾವತಿ
ರಾಜಾಸ್ಥಾನದ ಚಿತ್ತೋರಘಡದ ರಾಜ ರತನ್‌ಸಿಂಗ್ ಧರ್ಮಪತ್ನಿ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿದ್ದು, ಹೀಗಾಗಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು. ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ದೇವರಾಜ ಅರಸು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದರು.
ಪ್ರತಿಭಟನೆಯಲ್ಲಿ ಶ್ರೀ ಮಹಾರಾಣಾ ಪ್ರತಾಪ್ ಸಿಂಗ್‌ಜೀ ರಾಜಪೂತ್ ಕ್ಷತ್ರೀಯ ಸಮಾಜ್ ಅಧ್ಯಕ್ಷ ನಾರಾಯಣಸಿಂಗ್, ಗೌರವಾದ್ಯಕ್ಷ ಡಾ.ಬಿ.ಗೋಪಾಲ್ ಸಿಂಗ್, ಕಾರ್ಯದರ್ಶಿ ಮಂಜುನಾಥ್ ಸಿಂಗ್, ಖಜಾಂಚಿ ಮುರುಳಿಧರ್ ಸಿಂಗ್, ಗಿರಿಧರ್ ಸಿಂಗ್, ಬಾಲಾಜಿ ಸಿಂಗ್, ಆನಂದಸಿಂಗ್ ಮತ್ತಿತರರು ಭಾಗವಹಿಸಿದ್ದರು.