ಬೀದರ: ರಾಜ್ಯ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬ ಶೆಟ್ಟಿ ನೇತೃತ್ವದಲ್ಲಿ ನಗರದ ಪಕ್ಷದ ಕಚೇರಿ ಎದುರು ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರ ಹಾಗೂ ನೆರೆ ಪರಿಸ್ಥಿತಿ ನಿರ್ವಹಣೆಯಲ್ಲಿನ ರಾಜ್ಯ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಪ್ರತಿಭಟಿಸಿದರು. ಕೋವಿಡ್ ಸೋಂಕು ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಖರೀದಿಸಿರುವ ವೈದ್ಯಕೀಯ ಸಾಮಗ್ರಿಗಳು, ಥರ್ಮಲ್ ಸ್ಕ್ಯಾನರ್, ಆಕ್ಸಿಜನ್ ಸಿಲಿಂಡರ್, ಪಿಪಿಇ ಕಿಟ್, ಮಾಸ್ಕ್ಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದು, ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೈಗಾರಿಕೆ ವಿವಾದಗಳ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ಸರ್ಕಾರದ ಈ ನೀತಿಗಳು ಜನ ವಿರೋಧಿಯಾಗಿವೆ. ರಾಜ್ಯದಲ್ಲಿ ಅತಿವೃಷ್ಟಿ ತಲೆದೂರಿದ್ದು, ಅದರ ನಿರ್ವಹಣೆಯಲ್ಲಿಯೂ ಸಹ ಸರ್ಕಾರ ವಿಫಲಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಡೆಸಿರುವ ಭ್ರಷ್ಟಾಚಾರಗಳ ಕುರಿತು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಆನಂದ ದೇವಪ್ಪ, ಅಮೃತರಾಜ ಚಿಮಕೋಡೆ, ಶಂಕರ ದೊಡ್ಡಿ, ರೋಹಿದಾಸ ಘೋಡೆ, ಪ್ರದೀಪ ಕುಶನೂರ, ಅಬ್ದುಲ್ ಮನ್ನಾನ ಸೇಠ್, ಶಿವರಾಜ ಹಾಸನಕರ್, ಶಂಕರ ರೆಡ್ಡಿ, ಸಂಜಯ ಜಾಗೀರದಾರ, ಚಂದ್ರಕಾಂತ ಹಿಪ್ಪಳಗಾಂವ, ಯುಸೂಫ್, ಜಾರ್ಜ್ ಫರ್ನಾಂಡಿಸ್, ಯಶೋಧ ದಾಸಪ್ಪ, ಲತಾ ರಾಥೋಡ, ಗೋವರ್ಧನ ರಾಥೋಡ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.