ಶಿರಾ: ಸಾಲ ಮರುಪಾವತಿಗೆ ಒತ್ತಾಯಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ಲೇವಾದೇವಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾ. ದಸಂಸದಿಂದ ಸೋಮವಾರ ಇಲ್ಲಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಾದ್ಯಂತ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕಾಲಕ್ಕೆ ಕೆಲಸ, ಕೂಲಿ ಸಿಕ್ಕದೇ ಜನರು ನಿತ್ಯ ಜೀವನಕ್ಕೆ ಪರದಾಡುವಂತಾಗಿದೆ. ಇದರ ನಡುವೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿದಾರರು ಜನರಿಗೆ ಪಡೆದಿರುವ ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದು, ತಪ್ಪಿದರೆ ಹೆಚ್ಚು ಬಡ್ಡಿ ಹಾಕಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾರೆ.
ಬಲವಂತವಾಗಿ ಸಾಲ ವಸೂಲಿಗೆ ಇಳಿದಿದ್ದಾರೆ. ಜನರು ಸಂಕಷ್ಟದಲ್ಲಿ ಇರುವಾಗ ಮಾನವೀಯತೆ ಮರೆತು, ಸಾಲ ವಸೂಲಾತಿಗೆ ನಿಂತಿರುವ ಫೈನಾನ್ಸ್‌ಗಳು, ಹೆಂಗಸರೂ ಎನ್ನದೇ ಸೌಜನ್ಯವನ್ನೂ ಮೀರಿ ಮಾತನಾಡುತ್ತಾ ಪರಿ ಸ್ಥಿತಿಯ ದುರುಪಯೋಗ ಮಾಡುತ್ತಿದ್ದಾರೆ. ಲೇವಾದೇವಿದಾರರು ಗಿರವಿ ಇಟ್ಟಿರುವ ಚಿನ್ನವನ್ನು ಹರಾಜು ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಸಾಲ ವಸೂಲಾತಿ ನೆಪದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿದಾರ ದೌರ್ಜನ್ಯ ಹೆಚ್ಚಾಗುತ್ತಿದೆ. ತಾಲೂಕು ಆಡಳಿತ ತಕ್ಷಣ ಮಧ್ಯ ಪ್ರವೇಶಿಸಿ, ತಾಲೂಕಿನಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿ ಮತ್ತು ಖಾಸಗಿ ಲೇವಾದೇವಿದಾರರಿಗೆ ತಿಳಿವಳಿಕೆ ಪತ್ರ ನೀಡಿ, ಬಲವಂತದ ಸಾಲ ವಸೂಲಿ ಮಾಡದಂತೆ ಸೂಚನೆ ನೀಡಬೇಕು. ಆಡಳಿತದ ಸೂಚನೆ ಮೀರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.
ಸಮಿತಿ ತಾ. ಸಂಚಾಲಕ ಟೈರ್ ರಂಗನಾಥ್, ಶಿವಾಜಿನಗರ ತಿಪ್ಪೇಸ್ವಾಮಿ, ಕೆ.ರಾಜು, ಭೂತರಾಜು, ಕಾರೆಹಳ್ಳಿ ರಂಗನಾಥ್ ಸೇರಿದಂತೆ ಹಲವು ಮುಖಂಡರು ತಹಶೀಲ್ದಾರ್ ನಾಹಿದಾ ಜಂಜಂ ಅವರಿಗೆ ಮನವಿ ಸಲ್ಲಿಸಿದರು.