Advertisement

ವಿದ್ಯುತ್‌ ವಲಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

10:20 AM Jun 02, 2020 | Suhan S |

ಹುಬ್ಬಳ್ಳಿ: ವಿದ್ಯುತ್‌ ವಲಯದ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್‌ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು. ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ ವಿದ್ಯುತ್‌ ಬಿಲ್‌ 2020 ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಎಐಟಿಯುಸಿ ಹಾಗೂ ಅಖೀಲ ಭಾರತ ವಿದ್ಯುತ್‌ ನೌಕರರ ಫೆಡರೇಶನ್‌ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು. ನಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಲಾಯಿತು. ಸರಕಾರಿ ಸ್ವಾಮ್ಯದಲ್ಲಿದ್ದ ವಿದ್ಯುತ್‌ ಉತ್ಪಾದನೆ ಹಾಗೂ ಪ್ರಸರಣ ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ಖಂಡಿಸಲಾಯಿತು.

ಸರ್ಕಾರದ ಸ್ವಾಮ್ಯದಲ್ಲಿದ್ದಂತಹ ಉತ್ಪಾದನೆ, ಪ್ರಸರಣೆ ಹಾಗೂ ಸರಬರಾಜು ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ವಿದ್ಯುತ್‌ ಪ್ರಸರಣವನ್ನು ಖಾಸಗಿ ಕಂಪನಿಗಳಿಗೆ ವಹಿಸಿದ್ದರಿಂದ ವಿದ್ಯುತ್‌ ಶುಲ್ಕ ಹೆಚ್ಚಾಗಿದೆ. ಜನಸಾಮಾನ್ಯರ ಮೇಲೆ ವಿಪರೀತ ಹೊರೆ ಬಿದ್ದಿದೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳು ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಜನವಿರೋಧಿ, ನೌಕರ ವಿರೋಧಿ ವಿದ್ಯುತ್‌ ಬಿಲ್‌ 2020 ಕೈಬಿಡಬೇಕು ಎಂದು ಆಗ್ರಹಿಸಲಾಯಿತು.

ವಿದ್ಯುತ್‌ ವಲಯದ ಖಾಸಗೀಕರಣ ಕೈಬಿಡಬೇಕು. ಏಪ್ರಿಲ್‌ ತಿಂಗಳಿನಿಂದ ಪರಿಷ್ಕೃತ ವೇತನ ಜಾರಿ ಮಾಡಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಪಿಎಫ್‌ ನೌಕರರ ಪಾಲಿನ ಕಂತು ಕಡಿತಗೊಳಿಸದೇ ವೇತನದಲ್ಲಿ ಸೇರಿಸಿ ಪಾವತಿಸಬೇಕು. ಎಲ್ಲ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next