ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ವಿರುದ್ಧ ದೇಶದ್ಯಾಂತ ಕಾರ್ಮಿಕ ಸಂಘಟನೆಗಳು ಕರೆದಿದ್ದ ಮುಷ್ಕರವನ್ನು ಬೆಂಬಲಿಸಿ ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕಾರ್ಮಿಕ ನೀತಿಗಳ ಬದಲಾವಣೆಗೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಎಐಟಿಯುಸಿಜಿಲ್ಲಾಧ್ಯಕ್ಷ ಕೆ. ಗುಣಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಲಯಗಳಖಾಸಗೀಕರಣಕ್ಕೆ ಮುಂದಾಗಿದ್ದು, ಕಾರ್ಮಿಕ ಹಕ್ಕುಗಳನ್ನು ದಮನಮಾಡಲಾಗುತ್ತಿದೆ. ಕಾರ್ಪೋರೆಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳ ಓಲೈಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ದುಡಿಯುವ ವರ್ಗವನ್ನುಜೀತದಾಳುಗಳನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿರೇಣುಕಾರಾಧ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಜಿಲ್ಲೆಯ ಕಾಫಿ ಉದ್ಯಮ ವಿನಾಶದತ್ತ ಸಾಗುತ್ತಿದೆ. ಇದನ್ನುಪ್ರಶ್ನಿಸಬೇಕಾದ ನಮ್ಮ ಜನಪ್ರತಿನಿಧಿಗಳು, ಹಿಂದುತ್ವ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಬೇರೆ ಕಡೆ ಸೆಳೆಯುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಸಿಪಿಐ ಮುಖಂಡ ಅಮ್ಜದ್ ಮಾತನಾಡಿ, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಿ ದೇಶದ ಎಲ್ಲಾ ಸಾರ್ವಜನಿಕ ಕ್ಷೇತ್ರದ ಕಾಯ್ದೆ ಕಾನೂನುಗಳನ್ನು ತಿದ್ದುಪಡಿಗೆಮುಂದಾಗಿದ್ದು, ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ದುಡಿಯುವ ವರ್ಗದ ದಮನಕ್ಕೆ ಸರ್ಕಾರ ಮುಂದಾಗಿದೆ ಎಂದರು. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಸ್. ವಿಜಯಕುಮಾರ್ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಜಿ. ರಘು, ಯುಪಿಡಬ್ಲ್ಯು ಯೂನಿಯನ್ ಕಾರ್ಯದರ್ಶಿ ಎನ್.ಸಿ. ಒಬ್ಬಯ್ಯ, ರಾಧಾ ಸುಂದರೇಶ್ ಇತರರು ಇದ್ದರು.