ಬಳ್ಳಾರಿ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಎಸ್‌ಸಿ, ಎಸ್‌ಟಿ, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ಖಂಡಿಸಿ ಬಹುಜನ ಸಮಾಜ ಪಕ್ಷದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಕೌಲ್ ಬಜಾರ್‌ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾನಿರತರು ಎಚ್‌ಆರ್ ಗವಿಯಪ್ಪ ವೃತ್ತ, ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾ ಧಿಕಾರಿ ಕಚೇರಿ ತೆರಳಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಕೊನೆಗೊಳಿಸಲು ಸರ್ಕಾರಿ ಉದ್ದಿಮೆ, ಬ್ಯಾಂಕ್ ಅಯಿಲ್ ಕಂಪನಿ, ರೈಲ್ವೆ ಎಲ್‌ಐಸಿ, ಬಿಎನ್ ಎನ್‌ಎಲ್, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅದಾನಿಗೆ ಮಾರಿದ್ದಾರೆ. ಈ ಎಲ್ಲ ಅನ್ಯಾಯಗಳನ್ನು ಮರೆಮಾಚಲು ಉಭಯ ಸರ್ಕಾರಗಳು ಧರ್ಮ, ರಾಮ ಮಂದಿರ ನಿರ್ಮಾಣ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ 2018-19, 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ 60 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು. ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ದೆಹಲಿಯಲ್ಲಿ ಜ. 26ರಂದು ನಡೆದ ಅಹಿತಕರ ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟ ಜಾತಿ ಮೀಸಲು ಪ್ರಮಾಣವನ್ನು ಶೇ. 20, ಪರಿಶಿಷ್ಟ ವರ್ಗಕ್ಕೆ ಶೇ.10ಕ್ಕೆ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ, ವರ್ಗದವರ ಜಮೀನುಗಳನ್ನು ಉಳಿಸಲು ಕ್ರಮಕೈಗೊಳ್ಳಬೇಕು. ಇನಾಮ್ ಭೂಮಿಯನ್ನು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ತರಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ :ಎಟಿಎಂನಲ್ಲಿ ಹಲ್ಲೆ ಪ್ರಕರಣ: ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ಪ್ರಕಟ
ಪ್ರತಿಭಟನೆಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಚ್. ಈರಣ್ಣ, ಜಿಲ್ಲಾ ಉಸ್ತುವಾರಿ ಮಹ್ಮದ್ ಬಾಷಾ, ಪಿ. ರಸೂಲ್‌ಸಾಬ್, ಎಚ್.ಎಂ.ಇಸ್ಮಾಯಿಲ್, ಆಲಬಾಷಾ, ನಜೀರ್ ಅಹ್ಮದ್, ಸಲೀಂಬಾಷಾ, ಎಚ್. ಲಕ್ಷ್ಮಣ, ಜಾನ್‌ರಾಜ್, ಅಬ್ದುಲ್ ರಷೀದ್, ಎ.ಗೋವಿಂದ, ಕಲೀಲ್ ಖಾನ್, ಎಂ.ಡಿ.ಗೌಸ್ ಇದ್ದರು.