ವಿಧಾನಸಭೆ: ಜಿಮ್ ಗಳಲ್ಲಿ ಅವೈಜ್ಞಾನಿಕವಾಗಿ ಪ್ರೊಟೀನ್ ಪೌಡರ್ ಬಳಕೆಯಿಂದ ಆರೋಗ್ಯ ಸಮಸ್ಯೆಯಾಗುತ್ತಿರುವ ವಿಚಾರ ವಿಧಾನಸಭೆಯಲ್ಲಿ ಸದ್ದು ಮಾಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರಕಾರಕ್ಕೆ ಸೂಚನೆ ನೀಡಿದ್ದಾರೆ.
ಸರಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ಸ್ಪೀಕರ್ ಕಾಗೇರಿ ಸೇರಿ ಅನೇಕ ಶಾಸಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಆ ಪೌಡರ್ ವೈಜ್ಞಾನಿಕವಾಗಿ ಇದೆಯೋ, ಇಲ್ವೋ ಎಂಬುದನ್ನು ಪತ್ತೆ ಹಚ್ಚಿ. ಆರೋಗ್ಯ, ಗೃಹ, ಹಾಗೂ ಆಹಾರ ಇಲಾಖೆಗಳ ಸಚಿವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಿ. ದಪ್ಪ ಇದ್ದೋರು ಸಣ್ಣ ಆಗುತ್ತೀರಾ ಅಂದರೆ ಯಾರಿಗೆ ತಾನೇ ಆಸೆ ಇರಲ್ಲ? ಇಲ್ಲಿ ಯಾರಾದರೂ ದಪ್ಪ ಇರುವವರಿಗೆ ಆ ಪೌಡರ್ ಕೊಟ್ಟು ಪರಿಣಾಮ ನೋಡಿ ಎಂದು ನಗುತ್ತಾ ಕಾಗೇರಿ ಸಲಹೆ ನೀಡಿದರು.
ಇದನ್ನೂ ಓದಿ:ನಾರಾಯಣ್ ರಾಣೆ ಐಶಾರಾಮಿ ಬಂಗಲೆ ಧ್ವಂಸಕ್ಕೆ ಬಾಂಬೆ ಹೈಕೋರ್ಟ್ ಆದೇಶ
ಇದಕ್ಕೆ ದನಿ ಸೇರಿಸಿದ ಸತೀಶ್ ರೆಡ್ಡಿ, ಜಿಮ್ ಗಳಲ್ಲಿ ಪ್ರೊಟೀನ್ ಪೌಡರ್ ನೀಡುತ್ತಾರೆ. ಸಣ್ಣ, ದಪ್ಪ ಬಾಡಿ ಬಿಲ್ಡ್ ಗೆ ಬಳಕೆಯಾಗುತ್ತಿದೆ. ಇದನ್ನು ಅಕ್ರಮವಾಗಿ ಮಾರಾಟ ಮಾಡ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಂತೋಷ್ ಎಂಬ ಯುವಕನಿದ್ದಾನೆ. ಅವರ ಎಲ್ಲ ಅಂಗಗಳು ವಿಫಲವಾಗಿವೆ. ಅವನಿಗೆ ಚಿಕಿತ್ಸೆಗಾಗಿ ಈಗಾಗಲೇ 50 ಲಕ್ಷ ಖರ್ಚು ಮಾಡಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಪ್ರೋಟೀನ್ ಪೌಡರ್ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಅಕ್ರಮವಾಗಿ ಮಾರಾಟ ಮಾಡಿದರೆ ಕ್ರಮ ಜರುಗಿಸುತ್ತೇವೆ ಎಂದರು.