Advertisement

ಉಕ್ರೇನ್‌ ಗಡಿ ಮೂಲಕ ವಿದ್ಯಾರ್ಥಿಗಳ ರಕ್ಷಣೆ

11:59 PM Feb 25, 2022 | Team Udayavani |

ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕಾಪಾಡಲು ಕ್ಷಿಪ್ರ ಕಾರ್ಯಾಚರಣೆ ಶುರುವಾಗಿದೆ. ಉಕ್ರೇನ್‌ಗೆ ಹೊಂದಿಕೊಂಡು ಇರುವ ಹಂಗೇರಿ, ರೊಮೇನಿಯಾ ಗಡಿ ಮೂಲಕ ಅವರನ್ನು ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ವಿದೇಶಾಂಗ ಇಲಾಖೆಯ ತಂಡಗಳು ಆಯಾ ರಾಷ್ಟ್ರಗಳಿಗೆ ಈಗಾಗಲೇ ತೆರಳಿವೆ. ಈ ಎರಡೂ ದೇಶಗಳ ಗಡಿಗಳಿಗೆ ಸಮೀಪ ಇರುವ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ನಿಟ್ಟಿನಲ್ಲಿ ರಾಯಭಾರ ಕಚೇರಿ, ವಿವಿಗಳ ಪ್ರತಿನಿಧಿ ಕಚೇರಿಗಳು, ಮಿತ್ರರ ಜತೆಗೆ ಸಂಪರ್ಕದಲ್ಲಿ ಇರುವಂತೆಯೂ ಕೀವ್‌ನಲ್ಲಿ ಇರುವ ರಾಯಭಾರ ಕಚೇರಿ ತಿಳಿಸಿದೆ.

Advertisement

ಕೇಂದ್ರದಿಂದಲೇ ಪಾವತಿ: ಉಕ್ರೇನ್‌ನಿಂದ ಸ್ವದೇಶಕ್ಕೆ ಆಗಮಿಸುವ ವಿದ್ಯಾರ್ಥಿಗಳ ವಿಮಾನ ಟಿಕೆಟ್‌ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುವ ವಾಗ್ಧಾನ ಮಾಡಿದೆ. ವಿಮಾನ ಟಿಕೆಟ್‌ ದುಬಾರಿಯಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದ ಸ್ಯರು ಆಕ್ಷೇಪಿಸಿದ ಹಿನ್ನೆಲೆ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

ಐಎಎಫ್ ವಿಮಾನಗಳ ಮೂಲಕ ಏರ್‌ಲಿಫ್ಟ್?
ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡಲು ಐಎಎಫ್ ವಿಮಾನಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಐಎಎಫ್ ವಕ್ತಾರ ವಿಂಗ್‌ ಕಮಾಂಡರ್‌ ಆಶಿಶ್‌ ಮೊಘೇ “ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆತರಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಅದಕ್ಕಾಗಿ ಸಿ-17 ಗ್ಲೋಬ್‌ಮಾಸ್ಟರ್‌ ಮತ್ತು ಇಲ್ಯೂಶಿನ್‌-76 ಸರಕು ಸಾಗಣೆ ವಿಮಾನಗಳನ್ನು ಬಳಕೆ ಮಾಡುವ ಸಾಧ್ಯತೆಗಳೂ ಇವೆ.

ಯುದ್ಧಕ್ಕೆ ರಷ್ಯಾದಲ್ಲೇ ವಿರೋಧ
ಉಕ್ರೇನ್‌ ವಿರುದ್ಧ ದಾಳಿ ಮಾಡಿ ದ್ದನ್ನು ರಷ್ಯಾ ರಾಜಧಾನಿ ಮಾಸ್ಕೋ ದಲ್ಲಿಯೇ ಖಂಡಿಸಲಾಗಿದೆ. ಸಾವಿರಾರು ಮಂದಿ ನಾಗರಿಕರು ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಷ್ಯಾದ ವಿವಿಧ ನಗರಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಮಾಸ್ಕೋದಲ್ಲಿಯೇ 700 ಮಂದಿ, 340 ಮಂದಿಯನ್ನು ಸೇಂಟ್‌ ಪೀಟರ್ಸ್‌ ಬರ್ಗ್‌ನಲ್ಲಿ ಬಂಧಿಸಲಾಗಿದೆ. ಈ ಬಂಧನಗಳನ್ನು ವಿಶ್ವಸಂಸ್ಥೆ ಬಲವಾಗಿ ಖಂಡಿಸಿದೆ.

ಪೆಟ್ರೋಲ್‌ ಬಾಂಬ್‌ ಪ್ರಯೋಗಿಸಿ
ಕೀವ್‌: “ನಾಗರಿಕರೇ, ನೀವು ಮೊಲೊಟೊವ್‌ ಕಾಕ್‌ಟೇಲ್‌ಗ‌ಳನ್ನು (ಪೆಟ್ರೋಲ್‌ ಬಾಂಬ್‌)ಸಿದ್ಧಪಡಿಸಿ, ಅವುಗಳನ್ನು ನಮ್ಮ ನಗರವನ್ನು ಅತಿಕ್ರಮಿಸುತ್ತಿರುವವರ ಮೇಲೆ ಎಸೆಯಿರಿ. ಶತ್ರುಗಳನ್ನು ನಿರ್ನಾಮ ಮಾಡಲು ನಮ್ಮ ಮುಂದಿರುವುದು ಇದೊಂದೇ ದಾರಿ’  - ರಷ್ಯಾದ ಸೇನೆಯು ಉಕ್ರೇನ್‌ನ ರಾಜಧಾನಿ ಕೀವ್‌ ನಗರಕ್ಕೆ ಶುಕ್ರವಾರದಂದು ರಷ್ಯಾ ಸೇನೆಗಳು ಲಗ್ಗೆಯಿಟ್ಟ ಹಿನ್ನೆಲೆಯಲ್ಲಿ ಕೀವ್‌ ನಾಗರಿಕರಿಗೆ ಸಂದೇಶವೊಂದನ್ನು ಅಲ್ಲಿನ ರಕ್ಷಣ ಸಚಿವಾಲಯವೇ ರವಾನಿಸಿದೆ.

Advertisement

“ಅಮ್ಮಾ… ನಾವು ಸಾಯುತ್ತೇವಾ.? : ಮತ್ತೊಂದೆಡೆ, ಕೀವ್‌ ನಗರವನ್ನು ರಷ್ಯಾ ಪಡೆಗಳು ಆಕ್ರಮಿಸಿಕೊಳ್ಳುತ್ತಲೇ ಅಲ್ಲಿನ ಅನೇಕ ಜನರು ಮೆಟ್ರೋ ರೈಲು ನಿಲ್ದಾಣಗಳ ಬಂಕರ್‌ಗಳು ಅಥವಾ ಬಂಕರ್‌ ಸೌಕರ್ಯವಿರುವ ಕಟ್ಟಡಗಳ ನೆಲಮಹಡಿಗಳಲ್ಲಿ ಹೋಗಿ ಆಶ್ರಯ ಪಡೆದಿದ್ದಾರೆ. ಬಾಂಬ್‌ ಸದ್ದಿಗೆ ಮಕ್ಕಳು ಕಿರುಚಿ ಅಳುತ್ತಿರುವ ದೃಶ್ಯಗಳು ಮಾಮೂಲಾಗಿವೆ. ಕೆಲವು ಮಕ್ಕಳು ತಮ್ಮ ಅಮ್ಮಂದಿರನ್ನು ನಾವೆಲ್ಲ ಸಾಯುತ್ತೇವಾ ಎಂದು ಮುಗ್ಧವಾಗಿ ಪ್ರಶ್ನಿಸುತ್ತಿರುವುದು ಮನಕಲಕುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಷ್ಯಾದ ವೀಟೊ ಅಧಿಕಾರ ಕಿತ್ತುಕೊಳ್ಳಲು ಯತ್ನ
ಉಕ್ರೇನ್‌ ಮೇಲೆ ರಷ್ಯಾ ದಾಳಿ ತೀವ್ರಗೊಳಿಸುತ್ತಿದ್ದಂತೆ, ವಿಶ್ವಸಂಸ್ಥೆಯ ಭದ್ರತಾಸಮಿತಿಯಲ್ಲಿ ರಷ್ಯಾ ಹೊಂದಿರುವ ಶಾಶ್ವತ ಸದಸ್ಯ ಸ್ಥಾನವನ್ನು ಕಿತ್ತುಕೊಳ್ಳಲು ಯತ್ನವೊಂದು ಆರಂಭವಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರು, ವಿಶ್ವಸಂಸ್ಥೆಯ ನಿಯಮಗಳನ್ನು ರಷ್ಯಾ ಗಾಳಿಗೆ ತೂರಿದೆ ಎಂದು ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

ಈ ವಿಷಯವನ್ನು ವಿಶ್ವಸಂಸ್ಥೆಯ ಉಕ್ರೇನ್‌ ರಾಯಭಾರಿ ಸೆರ್ಗೆಯ್‌ ಕಿಸ್ಲಿತ್ಸé ಬಲವಾಗಿ ಪ್ರಸ್ತಾಪಿಸಿದ್ದಾರೆ. ರಷ್ಯಾಕ್ಕಿರುವ ಖಾಯಂ ಸ್ಥಾನಮಾನ, ವೀಟೊ ಅಧಿಕಾರವೇ ಅಸಿಂಧು ಎನ್ನುವುದು ಅದರ ವಾದ. 1991ರಲ್ಲಿ ಸೋವಿಯತ್‌ ಒಕ್ಕೂಟ ಬಿದ್ದುಹೋಯಿತು. ಈಗ ರಷ್ಯಾದ ಸೋವಿಯತ್‌ ಗಣರಾಜ್ಯ ಆ ಸ್ಥಾನದಲ್ಲಿದೆ. ಸೋವಿಯತ್‌ ಒಕ್ಕೂಟಕ್ಕಿದ್ದ ಖಾಯಂ ಸ್ಥಾನವನ್ನು, ಹೊಸ ಸೋವಿಯತ್‌ ಗಣರಾಜ್ಯಕ್ಕೆ ನೀಡಲಾಗಿದೆ ಎನ್ನುವುದಕ್ಕೆ ವಿಶ್ವಸಂಸ್ಥೆಯಲ್ಲಿ ಏನು ದಾಖಲೆಯಿದೆ? ಅದನ್ನು ಬಹಿರಂಗಪಡಿಸಿ ಎನ್ನುವುದು ಉಕ್ರೇನ್‌ ಆಗ್ರಹ. ಅವರ ಪ್ರಕಾರ ಈಗಿನ ರಷ್ಯಾಕ್ಕೆ ಆ ಸ್ಥಾನ ನೀಡಿರುವುದಕ್ಕೆ ವಿಶ್ವಸಂಸ್ಥೆಯಲ್ಲಿ ಯಾವುದೇ ನಿರ್ಣಯವಾಗಿಲ್ಲ. ಆದ್ದರಿಂದ ವಿಶ್ವದ ಐದು ರಾಷ್ಟ್ರಗಳ ನಡುವೆ ರಷ್ಯಾಕ್ಕೆ ಸ್ಥಾನ ನೀಡಿರುವುದೇ ತಪ್ಪು! ಈ ವಾದ ಎಲ್ಲಿಗೆ ಮುಟ್ಟುತ್ತದೆ ಎಂದು ಕಾದು ನೋಡಬೇಕು.

ಮತ್ತಷ್ಟು ಆರ್ಥಿಕ ದಿಗ್ಬಂಧನ
ಉಕ್ರೇನ್‌ ಮೇಲೆ ಯುದ್ಧ ಸಾರುವ ಮೂಲಕ ರಷ್ಯಾವು ಭಾರೀ ಪ್ರಮಾಣದ ದಿಗ್ಬಂಧನವನ್ನು ಎದುರಿಸುವಂತಾಗಿದೆ. ಗುರುವಾರ ರಾತೋರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ರಷ್ಯಾದ ನಾಲ್ಕು ಪ್ರಮುಖ ಬ್ಯಾಂಕ್‌ಗಳಿಗೆ ಆರ್ಥಿಕ ದಿಗ್ಬಂಧನ ಹೇರಿ ಆದೇಶ ಹೊರಡಿಸಿದ್ದಾರೆ. ಕೆಲವು ಪ್ರಮುಖ ಬಿಡಿಭಾಗಗಳ ರಫ್ತಿಗೂ ನಿರ್ಬಂಧ ಹೇರಲಾಗಿದ್ದು, ಇದರಿಂದ ರಷ್ಯಾದ ಹೈಟೆಕ್‌ ಆಮದಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಜಪಾನ್‌ ಕೂಡ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿವೆ. ಯುಕೆ ಕೂಡ ರಷ್ಯಾ ಬ್ಯಾಂಕ್‌ನ ಆಸ್ತಿ ಸ್ತಂಭನ, ರಫ್ತಿನ ಮೇಲೆ ನಿರ್ಬಂಧ, ಬ್ಯಾಂಕ್‌ಗಳ ಮೊತ್ತಕ್ಕೆ ಮಿತಿ, ಪ್ರಮುಖ ಕಂಪೆನಿಗಳಿಗೆ ದಿಗ್ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಯುಕೆ ವಿರುದ್ಧ ಕಿಡಿಕಾರಿರುವ ರಷ್ಯಾವು, ಅದಕ್ಕೆ ಪ್ರತಿಯಾಗಿ ಶುಕ್ರವಾರದಿಂದಲೇ ಅನ್ವಯವಾಗುವಂತೆ ಯುಕೆಯಿಂದ ರಷ್ಯಾಕ್ಕೆ ಬರುವ ಎಲ್ಲ ವಿಮಾನಗಳನ್ನೂ ನಿಷೇಧಿಸಿದೆ.

ರಷ್ಯಾ ಯೋಧರಿಗೆ ಧಿಕ್ಕಾರ
ಕೀವ್‌: ಕಪ್ಪು ಸಮುದ್ರ ದ್ವೀಪದ ಗಡಿಯಲ್ಲಿ ಕಾವಲುನಿರತರಾಗಿದ್ದ ಉಕ್ರೇನ್‌ಗಡಿ ರಕ್ಷಕರ ಗುಂಪು ರಷ್ಯಾ ಪಡೆಗಳ ದಾಳಿಗೆ ತುತ್ತಾಗುವುದಕ್ಕೂ ಮುನ್ನ ಧಿಕ್ಕಾರ ಕೂಗಿ ತಾಯ್ನಾಡಿನ ಮೇಲಿನ ಪ್ರೀತಿಯನ್ನು ಮೆರೆದ ಆಡಿಯೋ ಲಭಿ ಸಿದೆ. ಸ್ನೇಕ್‌ ಐಲ್ಯಾಂಡ್‌ ಗಡಿಯಲ್ಲಿ ಕಾವಲು ನಿರತರಾಗಿದ್ದ 13 ಕಾವಲು ಪಡೆಯ ಸಿಬಂದಿ ರಷ್ಯನ್‌ ಸಮರ ನೌಕೆಯಲ್ಲಿ ಧ್ವನಿ ವರ್ಧಕದ ಮೂಲಕ ನೀಡಲಾದ ಎಚ್ಚರಿಕೆಗೆ ಪ್ರತಿಯಾಗಿ ನೀವೇ ಮೊದಲು ಹಿಂದಿರುಗಿ ಎಂದು ಹೇಳಿದ್ದಲ್ಲದೆ ಧಿಕ್ಕಾರ ಕೂಗಿದ್ದರು. ಬಾಂಬ್‌ ದಾಳಿಯ ಎಚ್ಚರಿಕೆಯ ಹೊರತಾಗಿಯೂ ಈ ಸಿಬಂದಿಗಳು ತಾಯ್ನಾಡ ರಕ್ಷಣೆಯ ಹೊಣೆಯಿಂದ ನುಣುಚಿಕೊಳ್ಳದೇ ಶತ್ರು ಪಾಳಯದ ಯೋಧರಿಗೆ ತಿರುಗೇಟು ನೀಡಿದ ಈ ಆಡಿಯೋ ವನ್ನು ಉಕ್ರೇನಿಯನ್‌ ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ.

ಸಮರಾಂಗಣದಲ್ಲಿ..
1.
ಉಕ್ರೇನ್‌ ಸೇನೆಯ ಹಿರಿಯ ಅಧಿಕಾರಿಗಳ ಜತೆ ನೇರವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಮಾತುಕತೆ. ನಿಮ್ಮ ಸರಕಾರ ಉರುಳಿಸಿ, ಅಧಿಕಾರ ನೇತೃತ್ವ ವಹಿಸಿಕೊಳ್ಳಲು ಕರೆ.
2. ಕೀವ್‌ ಬಳಿ ಇರುವ ಹೋಸ್ಟೊಮೆಲ್‌ ಏರ್‌ಫೀಲ್ಡ್‌ ವಶಕ್ಕೆ ಪಡೆದ ರಷ್ಯನ್‌ ಮಿಲಿಟರಿ ಸೇನೆ. ಉಕ್ರೇನ್‌ ಸೇನೆಯ ವಿಶೇಷ ಘಟಕದ 200 ಸೈನಿಕರ ಹತ್ಯೆ ಮಾಡಿದ್ದಾಗಿಯೂ ರಷ್ಯಾದಿಂದ ಹೇಳಿಕೆ.
3. ನುಗ್ಗಿ ಬಂದ ರಷ್ಯಾ ಸೇನೆಯನ್ನು ಎದುರಿಸಲು ಕೀವ್‌ ಪ್ರವೇಶಿಸಿದ ಉಕ್ರೇನ್‌ನ ವಿವಿಧ ಹಂತದ ಮಿಲಿಟರಿ ವಾಹನಗಳು.
4. ಕೀವ್‌ ಉಳಿಸಿಕೊಳ್ಳುವ ಸಲುವಾಗಿ 18 ಸಾವಿರ ಸ್ವಯಂ ಸೇವಕರಿಗೆ ಗನ್‌ಗಳನ್ನು ನೀಡಿದ ಉಕ್ರೇನ್‌ ಆಂತರಿಕ ಸಚಿವಾಲಯ.
5. ಸಮರ ಆರಂಭವಾದ ಮೇಲೆ ರಷ್ಯಾದ 450 ಸೈನಿಕರು, 57 ನಾಗರಿಕರು ಸೇರಿ 194 ಉಕ್ರೇನ್‌ ಮಂದಿ ಸಾವು. ಈ ಬಗ್ಗೆ ಬ್ರಿಟನ್‌ ಸಂಸತ್‌ನಲ್ಲಿ ರಕ್ಷಣ ಸಚಿವರ ಹೇಳಿಕೆ.
6. ಈಗಾಗಲೇ ನಾವು 1,000ಕ್ಕೂ ಹೆಚ್ಚು ಮಂದಿ ರಷ್ಯಾ ಸೈನಿಕರನ್ನು ಕೊಂದಿದ್ದೇವೆ ಎಂದ ಉಕ್ರೇನ್‌ ಸರಕಾರದ ವಕ್ತಾರರ ಘೋಷಣೆ.
7. ಸಶಸ್ತ್ರ ಸೇನಾ ಕಾರ್ಯಾಚರಣೆ ಮುಗಿಯುವ ವರೆಗೆ ಮಾತುಕತೆ ಸಾಧ್ಯವಿಲ್ಲ ಎಂದ ರಷ್ಯಾ ಸರಕಾರದ ವಿದೇಶಾಂಗ ಸಚಿವಾಲಯ
8. ರಷ್ಯಾದ ನಾಗರಿಕ ವಿಮಾನಗಳಿಗೆ ತನ್ನ ವಾಯು ಪ್ರದೇಶ ಮುಚ್ಚಿ ಅಧಿಕೃತ ಆದೇಶ ಹೊರಡಿಸಿದ ಪೋಲೆಂಡ್‌ ಸರಕಾರ.
9. ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ನಡೆಸಿದ ಅಂದಾಜಿನ ಪ್ರಕಾರ, ಉಕ್ರೇನ್‌ನಲ್ಲಿ ಒಂದು ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
10. ರಷ್ಯಾ ಅಧ್ಯಕ್ಷ ಪುತಿನ್‌ಗೆ ಕರೆ ಮಾಡಿ ಮಾತನಾಡಿದ ಚೀನ ಅಧ್ಯಕ್ಷ ಕ್ಸಿ ಪಿಂಗ್‌. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ.
11. ಕಳೆದ 24 ಗಂಟೆಗಳಲ್ಲಿ ಕೀವ್‌ ನಗರದ 33 ನಾಗರಿಕ ಸ್ಥಳಗಳಲ್ಲಿ ರಷ್ಯಾ ಸೇನೆಯಿಂದ ಭೀಕರ ಬಾಂಬ್‌ ದಾಳಿ.
12. 18ರಿಂದ 60 ವರ್ಷದೊಳಗಿನ ನಾಗರಿಕರಿಗೆ ದೇಶ ತೊರೆಯದಂತೆ ಸೂಚನೆ ನೀಡಿದ ಉಕ್ರೇನ್‌. ಅಗತ್ಯ ಬಿದ್ದರೆ ಸೇನೆಗಾಗಿ ಬಳಕೆ.
13. ಯಾವ ವಯಸ್ಸಿನವರೇ ಆಗಲಿ, ಬಂದು ಸೇನೆಗೆ ಸೇರಿ ಎಂದು ಕರೆ ಕೊಟ್ಟ ಉಕ್ರೇನ್‌ ಅಧ್ಯಕ್ಷ ವೊಲೊಡೆಮಿರಿ ಝೆಲೆಂನ್ಸ್ಕಿ.
14. ಉಕ್ರೇನ್‌ಗೆ ಬಂದು ನಮಗೆ ಸಹಾಯ ಮಾಡಿ ಎಂದು ಐರೋಪ್ಯ ರಾಷ್ಟ್ರಗಳಿಗೆ ಅಧ್ಯಕ್ಷ ಝೆಲೆಂನ್ಸ್ಕಿ ವೀಡಿಯೋ ಸಂದೇಶದಲ್ಲಿ ಮನವಿ.

ಬಂಕರ್‌ಗಳೆಲ್ಲವೂ ಹೌಸ್‌ಫ‌ುಲ್‌!
ಜನರು ಅಡಗಿರುವ ಬಂಕರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿಕೊಂಡಿರುವುದರಿಂದ ಅಲ್ಲಿ ಸ್ಥಳದ ಅಭಾವ ಕಾಣಿಸಿಕೊಂಡಿದೆ. ಅಲ್ಲಿ ಸರಾಗವಾಗಿ ಓಡಾಡಲು, ಕುಳಿತುಕೊಳ್ಳಲೂ ತೊಂದರೆಯಿದೆ. “ನಾವಿಲ್ಲಿ ಎಷ್ಟು ದಿನ ಇರಬೇಕೋ ಗೊತ್ತಿಲ್ಲ. ಸದ್ಯಕ್ಕೆ ಇಲ್ಲಿ ಕುಳಿತುಕೊಳ್ಳಲು ಕುರ್ಚಿಗಳಾದರೂ ಇವೆ’ ಎಂದು ವಿಕ್ಟೋರಿಯಾ ಎಂಬ 35 ವರ್ಷದ ಮಹಿಳೆಯೊಬ್ಬರು ಹೇಳಿದ್ದಾರೆ.

ಷೇರುಪೇಟೆ ಚೇತರಿಕೆ
ಗುರುವಾರ ಎರಡು ವರ್ಷಗಳಲ್ಲೇ ಭಾರೀ ಪ್ರಮಾಣದ ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಶುಕ್ರವಾರ ಚೇತರಿಸಿಕೊಂಡಿದೆ. ಉಕ್ರೇನ್‌ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಅಮೆರಿಕ ಮತ್ತು ಮಿತ್ರಪಕ್ಷಗಳು ಕಠಿನ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸಿದ್ದಾರೆ. ಪರಿಣಾಮ, ಸೆನ್ಸೆಕ್ಸ್‌ 1,328.61 ಅಂಕಗಳ ಏರಿಕೆ ದಾಖಲಿಸಿ, 55,858ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 410 ಅಂಕಗಳಷ್ಟು ಏರಿಕೆ ಯಾಗಿ, ದಿನಾಂತ್ಯಕ್ಕೆ 16,658ಕ್ಕೆ ತಲುಪಿದೆ. ಎಚ್‌ಯುಎಲ್‌ ಮತ್ತು ನೆಸ್ಲೆ ಹೊರತುಪಡಿಸಿ, ಉಳಿದೆಲ್ಲ ಕಂಪೆನಿಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ. ಇನ್ನೊಂದೆಡೆ, ಅಮೆರಿಕವು ರಷ್ಯಾದ ತೈಲ ರಫ್ತಿನ ಮೇಲಾಗಲೀ, ಸ್ವಿಫ್ಟ್ ಪಾವತಿ ಜಾಲದ ಮೇಲಾಗಲೀ ನಿರ್ಬಂಧ ಹೇರದ ಕಾರಣ, ಜಾಗತಿಕ ಮಾರುಕಟ್ಟೆಗಳೂ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿವೆ. ದಿಲ್ಲಿಯಲ್ಲಿ ಶುಕ್ರವಾರ ಚಿನ್ನದ ಬೆಲೆ 1,274 ಇಳಿಕೆಯಾಗಿ, 10 ಗ್ರಾಂಗೆ 50,913 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next