Advertisement

45 ಜೀತದಾಳುಗಳ ರಕ್ಷಣೆ

04:42 PM Mar 24, 2019 | |

ಕೊಪ್ಪಳ: ಓರಿಸ್ಸಾ ಮೂಲದ 45 ಜನರನ್ನು ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದ ತಾಲೂಕಿನ ಗಿಣಗೇರಿಯ ಇಟ್ಟಂಗಿ ಭಟ್ಟಿ ಮೇಲೆ ಜಿಲ್ಲಾಡಳಿತ ಶುಕ್ರವಾರ ಸಂಜೆ ದಾಳಿ ನಡೆಸಿ, ಬಂಧನದಲ್ಲಿದ್ದ ಎಲ್ಲರನ್ನೂ ವಶಕ್ಕೆ ಪಡೆದು ಭಟ್ಟಿ ಮಾಲೀಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಗಿಣಗೇರಿ ಗ್ರಾಮದಲ್ಲಿ ಎಂಕೆಎಸ್‌ ಎನ್ನುವ ಇಟ್ಟಂಗಿ ಭಟ್ಟಿಯ ಮಾಲೀಕ, ಆಂಧ್ರ ಮೂಲದ ರಮೇಶ ಯಲ್ಲೂರ ಎಂಬುವನು ಓಡಿಶಾ ರಾಜ್ಯದ ಕಾರ್ಮಿಕರನ್ನು ಕರೆ ತಂದು ಕೆಲಸ ಮಾಡಿಸಿಕೊಳ್ಳುತ್ತಿದ್ದ. ಹಲವರನ್ನು ಮುಂಗಡ ಹಣ ನೀಡಿ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದ. ನವೆಂಬರ್‌ ತಿಂಗಳಲ್ಲೇ ಓಡಿಶಾದಿಂದ ಮಕ್ಕಳು ಸೇರಿದಂತೆ 58 ಜನರು ಈ ಭಟ್ಟಿಗೆ ಆಗಮಿಸಿದ್ದರು. ಭಟ್ಟಿ ಮಾಲೀಕನು ಕೆಲಸಕ್ಕೆ ಬಂದವರ ಎಲ್ಲ ಮೊಬೈಲ್‌ಗ‌ಳನ್ನು ಕಿತ್ತುಕೊಂಡು, ಹೊರಗೆ ನಡೆಯುವ ವಿದ್ಯಮಾನಗಳ ಕುರಿತು ಏನೂ ತಿಳಿಯದಂತೆ ಮಾಡಿದ್ದನು. ಅಲ್ಲದೇ ಎಲ್ಲರನ್ನೂ ಅಕ್ರಮವಾಗಿ
ಬಂಧನದಲ್ಲಿಟ್ಟು, ಇಟ್ಟಂಗಿ ಭಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದನು. 1000 ಇಟ್ಟಂಗಿಗೆ ಕೇವಲ 600 ರೂ. ವೇತನ ನೀಡುತ್ತಿದ್ದನು. ಇದರಿಂದ ಆ ಕುಟುಂಬಗಳು ನೊಂದು ಬೆಂದು ಹೋಗಿದ್ದವು. ಹೊರಗೆ ಏನು ಮಾಹಿತಿ ನೀಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು

ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯಗಳು ನಡೆದಿರುವ ಬಗ್ಗೆ ಮಹಿಳೆಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ನಮ್ಮನ್ನು ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ನಮ್ಮ ಎಲ್ಲ ಫೋನ್‌ಗಳನ್ನೂ ಕಿತ್ತುಕೊಂಡು ಒಂದು ಡಬ್ಬಿಯಲ್ಲಿ ಇಡಲಾಗಿತ್ತು. ಇಲ್ಲಿ ನಮಗೆ ತುಂಬ ಹಿಂಸೆಯಾಗುತ್ತಿತ್ತು ಎಂದು ಮಹಿಳೆಯರು ಸೇರಿದಂತೆ ಎಲ್ಲರು ಪೊಲೀಸರ ವೇದನೆ ಹೇಳಿಕೊಂಡಿದ್ದಾರೆ.

ಬೆಚ್ಚಿ ಬೀಳಿಸಿದ ಜೀತದ ಪ್ರಕರಣ!
ಅನ್ಯ ರಾಜ್ಯದವರನ್ನು ಕಡಿಮೆ ಹಣ ನೀಡಿ ಕರೆ ತಂದು ಹೆಚ್ಚಿನ ಕೆಲಸ ಮಾಡಿಸಿಕೊಳ್ಳುವ ಜೊತೆಗೆ ಅವರಿಗೆ ಹೊರಗಿನ ಪ್ರಪಂಚ ತಿಳಿಯದಂತೆ ಅಕ್ರಮ ಬಂಧನದಲ್ಲಿಟ್ಟಿರುವ ಪ್ರಕರಣ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ಇನ್ನೂ ಹಲವು ಇಟ್ಟಂಗಿ ಭಟ್ಟಿ ಸೇರಿದಂತೆ ಕಾರ್ಖಾನೆಗಳಿವೆ. ಅಲ್ಲಿಯೂ ಇದೇ ಪರಿಸ್ಥಿತಿ ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಈ ಕುರಿತು ಪರಿಶೀಲನೆ ನಡೆಸಲು ಮುಂದಾಗಿದೆ.

ಬಾಲಕರೂ ಪತ್ತೆ
ಜೀತಕ್ಕಿದ್ದ ಕುಟುಂಬಗಳಲ್ಲಿ 13 ಬಾಲಕರು ಪತ್ತೆಯಾಗಿದ್ದಾರೆ. ಈ ಮಕ್ಕಳನ್ನು ಜೀತದಾಳು ಎಂದು ಪರಿಗಣಿಸಿಲ್ಲ. ಮಕ್ಕಳು ಪಾಲಕರೊಂದಿಗೆ ಆಗಮಿಸಿ ಇಲ್ಲಿಯೇ ಉಳಿದುಕೊಂಡಿದ್ದರು. ಬಾಲಕರನ್ನೂ ಅಲ್ಲಿಯೇ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 370, 344, 374 ಹಾಗೂ ಬಾಂಡೆಡ್‌ ಲೇಬರ್‌ ಸಿಸ್ಟಂ ಆ್ಯಕ್ಟ್-1976 ಅಡಿ ಕಲಂ 16, 17, 18 ಹಾಗೂ ಜೆ.ಜೆ. ಕಾಯ್ದೆ-2015ರಡಿ ಕಲಂ 79, 84 ಅಡಿ ಇಟ್ಟಂಗಿ ಭಟ್ಟಿ ಮಾಲೀಕನ ಮೇಲೆ ಎಸಿ ಸಿ.ಡಿ. ಗೀತಾ ಅವರು ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಜೀತದಲ್ಲಿದ್ದ 45 ಜನರಿಗೂ ಜಿಲ್ಲಾಡಳಿತ ಮುಕ್ತಿ ನೀಡಲು ಸಿದ್ಧತೆ ನಡೆಸಿದ್ದು, ಅಗತ್ಯ ದಾಖಲೆಗಳ ಸಿದ್ಧತೆಯಲ್ಲಿದೆ.

Advertisement

ಎಲ್ಲರನ್ನೂ ವಶಕ್ಕೆ ಪಡೆದಿದ್ದೇವೆ: ಜಿಲ್ಲಾಧಿಕಾರಿ
ಕೊಪ್ಪಳ:
ಗಿಣಗೇರಿಯ ಇಟ್ಟಂಗಿ ಭಟ್ಟಿಯಲ್ಲಿ ಜೀತ ಪದ್ಧತಿಯಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ 45 ಜನರನ್ನು ವಶಕ್ಕೆ ಪಡೆದಿದ್ದು, ಅವರಿಗೆ ವಸತಿ ನಿಲಯದಲ್ಲಿ ತಂಗಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಅವರಿಗೆ ಜೀತದಿಂದ ಮುಕ್ತಿ ನೀಡಲು ಸಿದ್ಧತೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮಗೆ ಐಜೆಎಂನಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಶುಕ್ರವಾರ ರಾತ್ರಿಯೇ ಕಾರ್ಯ ಪ್ರವೃತ್ತರಾಗಿ ಇಟ್ಟಂಗಿ ಭಟ್ಟಿ ಮೇಲೆ ದಾಳಿ ಮಾಡಿ ಅಕ್ರಮವಾಗಿ ಇರಿಸಲಾಗಿದ್ದ 45 ಜನರನ್ನು ವಶಕ್ಕೆ ಪಡೆದಿದ್ದು, ಭಟ್ಟಿ ಮಾಲೀಕನನ್ನು ಬಂ ಧಿಸಿದ್ದೇವೆ. ಜೀತದಲ್ಲಿದ್ದ ಪ್ರತಿಯೊಬ್ಬರಿಗೂ ಸರ್ಕಾರದ ಅನುದಾನದಲ್ಲಿ 20 ಸಾವಿರ ರೂ. ಚೆಕ್‌ ನೀಡುವ ಜೊತೆಗೆ ಆ ಎಲ್ಲ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಓಡಿಶಾ ಸರ್ಕಾರಕ್ಕೂ ಪತ್ರ ಬರೆದು ಮನವಿ ಮಾಡಲಿದ್ದೇವೆ. ಕೆಲಸಕ್ಕೆಂದು ಬಂದಿದ್ದ ಮಹಿಳೆಯರಿಗೆ ಇಟ್ಟಂಗಿ ಭಟ್ಟಿ ಮಾಲೀಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆಯರು ಹೇಳಿಕೊಂಡಿದ್ದಾರೆ. ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ಈ ಕ್ರಮ ಜರುಗಿಸಿದ್ದೇವೆ. ಪ್ರತಿಯೊಬ್ಬರಿಗೂ ಜೀತಮುಕ್ತಿ ಪ್ರಮಾಣ ಪತ್ರ ನೀಡಿ, ಅಧಿಕಾರಿಗಳ ತಂಡದೊಂದಿಗೆ ಪೊಲೀಸ್‌ ಭದ್ರತೆಯಲ್ಲಿ ಪುನಃ ಅವರ ಗ್ರಾಮಕ್ಕೆ ಕಳುಹಿಸಿಕೊಡಲಿದ್ದೇವೆ. ರಾಯಚೂರು ಜಿಲ್ಲೆಯ ಇಟ್ಟಂಗಿ ಭಟ್ಟಿಯಲ್ಲೂ ಓಡಿಶಾ ಮೂಲದವರು ಕೆಲಸ ಮಾಡುತ್ತಿರುವ ಕುರಿತು ಮಾಹಿತಿ ಪಡೆದಿದ್ದೇವೆ. ಅಲ್ಲಿನ ಜಿಲ್ಲಾಧಿಕಾರಿ ಈ ಕುರಿತು ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಹಲವು ಇಟ್ಟಂಗಿ ಭಟ್ಟಿಗಳಿವೆ. ಕೆಲವೊಂದು ಕಾರ್ಮಿಕರು ತಮ್ಮ ಸಮಸ್ಯೆಗಳ ಕುರಿತು ನಮ್ಮ ಬಳಿ ಬಂದು ಸಮಸ್ಯೆ ಹೇಳಿಕೊಂಡಿದ್ದು, ಪರಿಶೀಲನೆ ಮಾಡಲಿದ್ದೇವೆ. ಜೊತೆಗೆ ಇಟ್ಟಂಗಿ ಭಟ್ಟಿ ಮಾಲೀಕರ ಜೊತೆ ಸಭೆ ನಡೆಸಿದ್ದು, ಕಡ್ಡಾಯವಾಗಿ ಇಟ್ಟಂಗಿ ಭಟ್ಟಿಯನ್ನು ಎನ್‌ಎ ಮಾಡಿಸಿಕೊಳ್ಳುವಂತೆ ಸೂಚಿಸಿದ್ದೇನೆ. ಕಾರ್ಮಿಕರಿಗೆ ಕನಿಷ್ಟ ವೇತನ ಕೊಡುವ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next