ಯಾದಗಿರಿ: ಆಹಾರಧಾನ್ಯ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಗೋದಾಮು ನಿರ್ಮಿಸಲು 5 ಎಕರೆ ಜಮೀನು ಮಂಜೂರು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆ ಸಮರ್ಪಕ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಪಡಿತರ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಪಡಿತರ ಆಹಾರ ಧಾನ್ಯ ಬಿಡುಗಡೆ ಮಾಡಿದೆ. ಹೊರ ರಾಜ್ಯದಿಂದ ಹಾಗೂ ಬೇರೆ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ವಾಪಸ್ಸಾದ ಕಾರ್ಮಿಕರಿಗೆ ಆಧಾರ್ ಕಾರ್ಡ್ ಮುಖಾಂತರ 10 ಕೆಜಿ ಅಕ್ಕಿ ಹಾಗೂ ಎರಡು ಕೆಜಿ ಬೇಳೆ ವಿತರಿಸಬೇಕು ಎಂದು ತಿಳಿಸಿದರು.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಮೂರು ತಿಂಗಳವರೆಗೆ ಉಚಿತ ಗ್ಯಾಸ್ ನೀಡಲಾಗಿದೆ. ವಿಶೇಷವಾಗಿ ಯಾದಗಿರಿ ಜಿಲ್ಲೆಗೆ 2500 ಗ್ಯಾಸ್ ಕನೆಕ್ಷನ್‌ನ್ನು ಹೆಚ್ಚುವರಿಯಾಗಿ ಕೊಡಲಾಗಿದ್ದು, ಅದನ್ನು ಬಡವರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಇರುವ ನ್ಯಾಯಬೆಲೆ ಅಂಗಡಿಗಳ ಅಂತರ ಹೆಚ್ಚಿದೆ. ಇದರಿಂದ ಪಡಿತರ ಚೀಟಿದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಇನ್ನೂ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳಿಗೆ ಅನುಮತಿ ನೀಡಲು ಕೋರಿದರು.
ಡಿಸಿ ಎಂ.ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ ಮತ್ತು ರದ್ದುಪಡಿಸಿದ ಪಡಿತರ ಚೀಟಿಗಳ ಫಲಾನುಭವಿಗಳಿಗೂ ಕೂಡ ಕೋವಿಡ್-19 ತುರ್ತು ಪರಿಸ್ಥಿತಿ ಸಂಬಂಧ ಪಡಿತರ ವಿತರಣೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಸಂಬಂಧ ಎಸ್‌ಡಿಆರ್‌ಎಫ್ ಅನುದಾನ ಕೂಡ ಬಳಸಿಕೊಂಡು ಪಡಿತರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಆಹಾರ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ ಇಲಾಖೆಯಿಂದ ವಿತರಿಸಿದ ಆಹಾರಧಾನ್ಯ ಮತ್ತು ವಿವಧ ಯೋಜನೆಗಳ ಪ್ರಗತಿ ವಿವರಿಸಿದರು. ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್. ರೊಟ್ನಡಗಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇತರರು ಇದ್ದರು.