ಬೆಂಗಳೂರು: ಸ್ವರ ಮಾಂತ್ರಿಕ, ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ ಸುಮಾರು 50 ಸಾವಿರ ಹಾಡುಗಳನ್ನು ಹಾಡಿ ದೇಶದ ಜನರ ಹೃದಯದಲ್ಲಿ ಮನೆ ಮಾಡಿರುವ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಮಣ್ಯಂ ಸ್ಮರಣಾರ್ಥ ತಮಿಳುನಾಡಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ನೆರವಾಗುವ ಸದುದ್ದೇಶದಿಂದ ಡಿ. 8ರಂದು ನಗರದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಕನಕಪುರ ರಸ್ತೆ, ಕೋಣನಕುಂಟೆ ಕ್ರಾಸ್ ಬಳಿ ಇರುವ ಪ್ರೇಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕನ್ನಡದಲ್ಲಿ ಹಾಡಿರುವ ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಎಸ್.ಪಿ. ಚರಣ್ ಹಾಡಲಿದ್ದಾರೆ, ಹಾಗೆಯೇ ಇಡೀ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ಕುರಿತು ಗುರುವಾರ (ನ.28) ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಸ್.ಪಿ ಬಾಲಸುಬ್ರಮಣ್ಯಂ ಪುತ್ರ ಎಸ್.ಪಿ ಚರಣ್ ಮಾತನಾಡಿದರು.
ಎಸ್ ಪಿಬಿ ಅವರ ಕಂಠಸಿರಿಯಲ್ಲಿ ಬಂದಿರುವ ಮಧುರ ಹಾಡುಗಳನ್ನು ಅಭಿಮಾನಿಗಳ ಹೃದಯದಲ್ಲಿಟ್ಟು ಹೋಗಿದ್ದಾರೆ. ನಾಡಿನ ಈ ಮಹಾನ್ ಗಾಯಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ತಮಿಳುನಾಡಿನ ತಿರುವಳ್ಳುವರ್ ನಲ್ಲಿ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕವು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ, ಗಾಯನ ಕ್ಷೇತ್ರದಲ್ಲಿ ನಡೆದು ಬಂದ ದಾರಿ, ನೀಡಿದ ಕೊಡುಗೆಗಳು, ಲಕ್ಷಾಂತರ ಗಾಯಕರಿಗೆ ನೀಡಿದ ಸ್ಪೂರ್ತಿಯ ವಿವರಗಳನ್ನು ಸ್ಮಾರಕದ ಮೂಲಕ ಮುಂದಿನ ತಲೆಮಾರಿಗೆ ಹಂಚಲಾಗುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಗಳನ್ನು ಉಳಿಸಿ, ಬೆಳೆಸಲು, ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಅವರು ನೀಡಿರುವ ಕೊಡುಗೆಯನ್ನು ಈ ಸ್ಮಾರಕ ಪಸರಿಸಲಿದೆ. ಅಲ್ಲದೇ, ಯುವ ಸಮುದಾಯಕ್ಕೆ ಸ್ಪೂರ್ತಿಯ ಸೆಲೆಯಾಗುತ್ತದೆ. ಡಿ.8ರಂದು ನಡೆಯುವ ಲೈವ್ ಕಾನ್ಸರ್ಟ್ ಕಾರ್ಯಕ್ರಮದಿಂದ ನಿಧಿಯನ್ನು ಸಂಗ್ರಹಿಸಿ ಅದನ್ನು ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದರು.