Advertisement

ಮೋಪಾ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರಿಡಲು ಪ್ರಸ್ತಾವನೆ

04:10 PM Oct 30, 2022 | Team Udayavani |

ಪಣಜಿ: ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇದೀಗ ಟೇಕ್ ಆಫ್ ಆಗಲು ಸಿದ್ಧವಾಗುತ್ತಿದೆ. ಈ ವಿಮಾನ ನಿಲ್ದಾಣಕ್ಕೆ ಗೋವಾದ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರಿಡಲು ಪ್ರಸ್ತಾವನೆ ಬಂದಿದೆ ಎಂದು ಹೇಳಲಾಗುತ್ತಿದೆ.

Advertisement

ಡಿಸೆಂಬರ್ 13 ರಂದು ಪರಿಕ್ಕರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ  ಭರದ ಸಿದ್ಧತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈಗ ವಿಶ್ವಸಂಸ್ಥೆಯ ಅಂತಾರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅಂತಿಮ ಅನುಮೋದನೆ ಮಾತ್ರ ಬಾಕಿ ಉಳಿದಿದೆ ಎನ್ನಲಾಗಿದ್ದು ಅದು ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮೋಪಾ ವಿಮಾನ ನಿಲ್ದಾಣದ ಉದ್ಘಾಟನಾ ದಿನಾಂಕಗಳು ನಿರಂತರವಾಗಿ ಬದಲಾಗುತ್ತಿದ್ದರೂ, ಇದೀಗ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಪ್ರಧಾನಿಗೆ ಅಧಿಕೃತ ಪತ್ರ ಬರೆದು ಸಮಯಾವಕಾಶ ಕೋರಿದ್ದಾರೆ. ಪಿಎಂಒ ಕಚೇರಿಯಿಂದ ಸ್ವೀಕೃತಿ ಬಂದ ತಕ್ಷಣ ಉದ್ಘಾಟನೆಯ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಸಚಿವಾಲಯದ ವಿಶೇಷ ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಕ್ಟೋಬರ್ 26 ರಂದು ಭದ್ರತಾ ಅನುಮತಿಯನ್ನು ಹೊರಡಿಸಿದ ನಂತರ, ವಿಮಾನ ನಿಲ್ದಾಣದ ಉದ್ಘಾಟನಾ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿವೆ.

ಕೆನಡಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಾದ ಇಂಟರ್ ನ್ಯಾಶನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ನಿಂದ ಅನುಮೋದನೆ ಪಡೆಯುವವರೆಗೆ ಮೋಪಾ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. 2013ರ ಜೂನ್‍ನಲ್ಲಿ ಟೆಕ್ನೋ ಎಕನಾಮಿಕ್ ಫೀಸಿಬಿಲಿಟಿ ವರದಿಯನ್ನು ಸಲ್ಲಿಸಿದ ನಂತರ ಅನುಮೋದನೆ ದೊರೆತಿದೆ. ಆ ನಂತರವೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಈಗ ವಿಮಾನ ನಿಲ್ದಾಣವು ಪೂರ್ಣಗೊಂಡಿದೆ, ಇದು ನಿಜವಾಗಿಯೂ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆಯೇ ಎಂದು ಸಂಘವು ಖಚಿತಪಡಿಸುತ್ತದೆ. ಆಗ ಮಾತ್ರ ಗೋವಾದ ಈ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಇಳಿಯಲು ಅವಕಾಶ ನೀಡಲಾಗುವುದು.

Advertisement

ಮೋಪಾ ವಿಮಾನ ನಿಲ್ದಾಣ ಸಿದ್ಧವಾಗಿದೆ ಎಂಬ ವರದಿ ಇನ್ನೂ ಈ ಸಂಸ್ಥೆಗೆ ಸಲ್ಲಿಕೆಯಾಗಿಲ್ಲ. ಹಾಗಾಗಿ ಉದ್ಘಾಟನೆಯಾದರೂ ಈ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮೋಪಾ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ ಎರಡೂ ರನ್‍ವೇಗಳು ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿವೆ. ಭಾರತದ ಯಾವುದೇ ವಿಮಾನ ನಿಲ್ದಾಣದಲ್ಲಿ ಇಂತಹ ರನ್‍ವೇಗಳಿಲ್ಲ ಎಂದು ಹೇಳಲಾಗುತ್ತದೆ. ಮಂಜು ಅಥವಾ ಮಳೆಯಿಂದಾಗಿ ರನ್‍ವೇ ಕಾಣಿಸದಿದ್ದರೆ, ವಿಮಾನವು ಆಕಾಶದಲ್ಲಿ ಸುಳಿದಾಡಬೇಕು ಮತ್ತು ಮತ್ತೊಂದು ವಿಮಾನ ನಿಲ್ದಾಣದಲ್ಲಿ ಇಳಿಯಬೇಕು, ಅದು ಮೋಪಾ ವಿಮಾನ ನಿಲ್ದಾಣದಲ್ಲಿ ಆಗುವುದಿಲ್ಲ. ಏಕೆಂದರೆ ಇಲ್ಲಿನ ರನ್‍ ವೇ ಎಂತಹ ಮಂಜಿನ ಪರಿಸ್ಥಿತಿಯಿದ್ದರೂ  ಮೇಲಿಂದ ಕಾಣುತ್ತದೆ ಅಂತಹ ವ್ಯವಸ್ಥೆಯನ್ನು ಈ ಸ್ಥಳದಲ್ಲಿ ಅಳವಡಿಸಲಾಗಿದೆ. ಈ ರನ್‍ವೇಗಳು ಸರಿಸುಮಾರು ಮೂರೂವರೆ ಕಿಲೋಮೀಟರ್ ಉದ್ದವಿದ್ದು, ಯಾವುದೇ ರೀತಿಯ ದೊಡ್ಡ ಜಂಬೋ ವಿಮಾನಗಳು ಅವುಗಳ ಮೇಲೆ ಇಳಿಯಬಹುದು. ವಿಮಾನದ ವೇಗ ಎಷ್ಟೇ ಇದ್ದರೂ ಪರಿಣಾಮ ಬೀರುವುದಿಲ್ಲ ಎಂಬುದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next