ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ 30 ಕಾಯಂ ಬೋಧಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ನಿರ್ಣಯವನ್ನು ಸಿಂಡಿಕೇಟ್ ಸಭೆಯಲ್ಲಿ ಕೈಗೊಳ್ಳಲಾಗಿದೆ.
ನಗರದ ಹೊರವಲಯದಲ್ಲಿರುವ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯ ಬಳಿಕ ವಿವಿ ಕುಲಪತಿ ಪ್ರೊ.ಹೇಮಂತ್‌ಕುಮಾರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸರ್ಕಾರಕ್ಕೆ ಈ ಕುರಿತು ಎರಡು ಬಾರಿ ಪ್ರಸ್ತಾಪ ಕಳುಹಿಸಲಾಗಿದೆ. ಸ್ನಾತಕೋತ್ತರ ಕೇಂದ್ರಕ್ಕೆ ಕನಿಷ್ಠ 30 ಕಾಯಂ ಬೋಧಕರ ಅಗತ್ಯವಿದೆ. ಕೋವಿಡ್ ಕಾರಣದಿಂದ ಯಾವ ಹುದ್ದೆಗಳನ್ನೂ ಸರ್ಕಾರ ಭರ್ತಿ ಮಾಡಿಲ್ಲ. ಈ ಕುರಿತು ಉನ್ನತ ಶಿಕ್ಷಣ ಸಚಿವರೊಡನೆ ಚರ್ಚಿಸಲಾಗಿದೆ. ಗಡಿ ಹಾಗೂ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 9 ಕಾಲೇಜುಗಳ ಸ್ವಾಯತ್ತತೆಯನ್ನು ಮುಂದುವರಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರಿನ ಜೆಎಸ್‌ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮತ್ತು ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು, ಮೈಸೂರಿನ ಬನ್ನಿಮಂಟಪದಲ್ಲಿರುವ ಸೇಂಟ್ ಫಿಲೋಮಿನಾ ಕಾಲೇಜು, ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಸರ್ಕಾರಿ ಮಹಾವಿದ್ಯಾಲಯ ಕಾಲೇಜುಗಳ ಸ್ವಾಯತ್ತತೆ ಮುಂದುವರಿಸ ಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಗೆ 340 ಕೋಟಿ ರೂ. ಬಜೆಟ್ ಸಿದ್ಧಪಡಿಸಲಾಗಿದೆ. 250 ಕೋಟಿಗಾಗಿ ರಾಜ್ಯಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. 90 ಕೋಟಿ ರೂ.ಗಳನ್ನು ಶುಲ್ಕದ ಮೂಲಕ ಸಂಗ್ರಹಿಸುತ್ತೇವೆ. ವೇತನ ಮತ್ತುಪಿಂಚಣಿಗಾಗಿ 250 ಕೋಟಿ ರೂ. ಅಗತ್ಯವಿದ್ದು, ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಕುಲಪತಿಯವರು ತಿಳಿಸಿದರು.