Advertisement
ವೈಜ್ಞಾನಿಕ ಕ್ರಮ ಹೀಗಿದೆಭತ್ತದ ಕೃಷಿಯ ವೈಜ್ಞಾನಿಕ ಕ್ರಮವೆಂದರೆ ನಾಟಿಗಿಂತ 3 ವಾರಗಳ ಮೊದಲು ಪ್ರತಿ ಎಕರೆಗೆ 3 ಕ್ವಿಂಟಾಲ್ ಸುಣ್ಣ , 2 ಟನ್ ಹಸುರೆಲೆ ಅಥವಾ ಸೆಣಬನ್ನು ಬಳಸಿ ಮಣ್ಣಿಗೆ ಸೇರಿಸ ಬೇಕು. ನಾಟಿಯ 10ರಿಂದ 15 ದಿನಗಳ ಮೊದಲು ಎಕರೆಗೆ 2 ಟನ್ ಹಟ್ಟಿಗೊಬ್ಬರ ಸೇರಿಸಿ ಉಳುಮೆ ಮಾಡಬೇಕು.
ನಾಟಿ ಬಳಿಕ ಎರಡು ಬಾರಿ ಗೊಬ್ಬರ ಬಳಕೆ ನಾಟಿಯ ಒಂದು ದಿನ ಮೊದಲು ಅಥವಾ ಕೊನೆಯ ಉಳುಮೆಗಿಂತ ಮುಂಚೆ ಯೂರಿಯ-17 ಕೆಜಿ, ಶಿಲಾರಂಜಕ 60 ಕೆಜಿ ಮತ್ತು ಮ್ಯೂನರೇಟ್ ಆಪ್ ಪೊಟಾಷ್-15 ಕೆಜಿ ಹಾಕಿ ಉಳುಮೆ ಮಾಡಿ ನಾಟಿ ಮಾಡಬೇಕು. ಇದಾದ 25 ದಿನ ಮತ್ತು 50 ದಿನಗಳಲ್ಲಿ ಎರಡು ಬಾರಿ ಯೂರಿಯ 17 ಕೆಜಿ ಮತ್ತು ಮ್ಯೂನರೇಟ್ ಆಫ್ ಪೊಟಾಷ್ 15 ಕೆಜಿ ಪ್ರತಿ ಎಕ್ರೆಗೆ ಬಳಸಬೇಕು.
ಕರಾವಳಿಯ ಹೆಚ್ಚಿನ ರೈತರು ಬಿತ್ತನೆ ಅಥವಾ ನಾಟಿ ಸಂದರ್ಭ ಗೊಬ್ಬರ ಹಾಕುವ ಪರಿಪಾಠವಿಟ್ಟುಕೊಂಡಿರುವುದಿಲ್ಲ. ಅಂತವರು ನಾಟಿಯಾದ ಬಳಿಕ ಅಥವಾ 20 ದಿನಗಳ ಮೇಲ್ಪಟ್ಟು ಪ್ರತಿ ಎಕರೆಗೆ ಯೂರಿಯ-17 ಕೆಜಿ ಮತ್ತು ಪೊಟಾಷ್ -15 ಕೆಜಿ ಮತ್ತು ಅಷ್ಟೇ ಪ್ರಮಾಣದ ಗೊಬ್ಬರವನ್ನು ಪುನಃ 25 ದಿನಗಳ ಅನಂತರ ಅಂದರೆ ನಾಟಿಯಾದ, 50ನೇ ದಿನ ಗದ್ದೆಯಲ್ಲಿ ತೆಳುವಾಗಿ ನೀರು ನಿಲ್ಲಿಸಿ, ಹೆಚ್ಚುವರಿ ನೀರನ್ನು ಗದ್ದೆಯಿಂದ ಹೊರ ಬಿಟ್ಟ ಬಳಿಕ ಗೊಬ್ಬರಗಳನ್ನು ಹಾಕಬೇಕು.
ಗದ್ದೆಯಲ್ಲಿ ತೆಳು ನೀರು ನಿಲ್ಲಿಸಬೇಕು. ಮಳೆಗಾಲ ಗದ್ದೆಯಲ್ಲಿ ಹೆಚ್ಚು ನೀರು ನಿಲ್ಲುವುದು ಸರ್ವೆ ಸಾಮಾನ್ಯ. ಇದಕ್ಕೆ ಹೆಚ್ಚು ಮಳೆ ಕಾರಣ. ಬಿತ್ತನೆ ಮತ್ತು ನಾಟಿಯ ಸಂದರ್ಭ ಆದಷ್ಟೂ ತೆಳುವಾಗಿ ನೀರು ನಿಲ್ಲಿಸಬೇಕು. ಹೆಚ್ಚು ನೀರು ನಿಂತರೆ ನೇಜಿ ಕೊಳೆಯುವ ಸಾಧ್ಯತೆಯಿರುತ್ತದೆ. ಅಧಿಕ ನೀರು ನಿಲ್ಲುವ ಗದ್ದೆಗಳಾದರೆ ಆದಷ್ಟೂ ನೆರೆ ನಿರೋಧಕ ಸಹ್ಯಾದ್ರಿ ಪಂಚಮುಖಿ ತಳಿ ಬಳಕೆ ಸೂಕ್ತ. ಕೃಷಿ ಮತ್ತು ತೋಟಗಾರಿಕ ಸಂಶೋಧನಾ ಕೇಂದ್ರ ಬ್ರಹ್ಮಾವರದಲ್ಲಿ ಈ ತಳಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ಇದನ್ನು ರೈತರು ಬಳಸಬಹುದು. ಸಹ್ಯಾದ್ರಿ ನೀರು ನಿರೋಧಕ ತಳಿ ಬಳಕೆ
ಸಹ್ಯಾದ್ರಿ ತಳಿ ನೀರು ನಿರೋಧಕ ತಳಿಯಾಗಿದ್ದು, ನೀರು ನಿಲ್ಲುವ ಗದ್ದೆಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ ಬೇಸಗೆಯಲ್ಲಿ ಗದ್ದೆಯಲ್ಲಿ ನೀರು ಜಾಸ್ತಿ ನಿಂತರೆ ತೊಂದರೆಯಾಗುತ್ತದೆ. ಆದಷ್ಟೂ ಹೊಸ ನೀರು ಹಾಕಿ, ಹಳೆ ನೀರನ್ನು ಗದ್ದೆಯಿಂದ ಹೊರತೆಗೆಯಬೇಕು. ಮಳೆಗಾಲದಲ್ಲಿ ಹೆಚ್ಚಿನ ರೋಗ ಬಾಧೆಯಿರುವುದಿಲ್ಲ. ಮಳೆ ಮತ್ತು ಬೇಸಗೆಯ ವಾತಾವರಣವಿದ್ದರೆ ಗರಿ ಮಡಚುವ ಹುಳ ಮತ್ತು ಎಲೆ ಸುರುಳಿ ಹುಳದ ಬಾಧೆಯಿರುತ್ತದೆ. ಈ ಕೀಟ ತಗಲಿದ್ದರೆ ಗುರುತಿಸುವುದು ಬಹಳ ಸುಲಭ. ಕೀಟ ಬಂದ ಗದ್ದೆಯ ಗರಿಗಳು ಬಳಿಬಿಳಿಯಾಗಿರುತ್ತವೆ. ಇದರ ಹತೋಟಿಗೆ ಕ್ವಿನಾಲ್‌ಪಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
Related Articles
ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ಗುರುವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.
ವಾಟ್ಸಪ್ ಸಂಖ್ಯೆ 7618774529
Advertisement