ಬೆಂಗಳೂರು: ಎಸ್‌ಸಿ-ಎಸ್‌ಟಿ ವರ್ಗದ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿ ಸಂಬಂಧದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವುದರಿಂದ ಮುಂದೇನು ಮಾಡಬೇಕೆಂಬ ಬಗ್ಗೆ ರಾಜ್ಯ ಸರ್ಕಾರ ಅಡ್ವೋಕೇಟ್ ಜನರಲ್ ಅಭಿಪ್ರಾಯ ಕೇಳಿದೆ.
ರಾಜ್ಯಪಾಲರು ಕೇಳಿರುವ ಸ್ಪಷ್ಟನೆಯೊಂದಿಗೆ ಮತ್ತೆ ಸುಗ್ರೀವಾಜ್ಞೆ ಕಳುಹಿಸಬೇಕೇ ಅಥವಾ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆಯ ಬೇಕೇ ಎಂಬ ಬಗ್ಗೆ ಅಡ್ವೋಕೇಟ್ ಜನರಲ್ ಅಭಿಪ್ರಾಯ ಕೇಳಲಾಗಿದೆ. ಶನಿವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವ
ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸುಪ್ರೀಂಕೋರ್ಟ್‌ನಲ್ಲಿಪ್ರಕರಣ ವಿಚಾರಣೆಗೆ ಬರುವುದರಿಂದ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿರುವುದರಿಂದ ನ್ಯಾಯಾಲಯದ ಮುಂದೆ ನಮ್ಮ ವಾದ ಏನಿರಬೇಕು ಎಂಬುದರ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ಸಮಾಲೋಚನೆ: ಈ ಮಧ್ಯೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬುಧವಾರ ಇದೇ ವಿಚಾರವಾಗಿ ಸಮಾಲೋಚನೆ ನಡೆಸಿದರು.
ಸೂಪರ್ ನ್ಯೂಮರರಿ ಕೋಟಾದಡಿ ವಿಶೇಷ ಪ್ರಕರಣ ಎಂದು ಈಗಾಗಲೇ ಬಡ್ತಿ ಕೊಟ್ಟಿರುವವರಿಗೆ ಹಿಂಬಡ್ತಿ ನೀಡದೆ ಯಾರಿಗೂ ಅನ್ಯಾಯವಾಗದಂತೆ ಬಡ್ತಿಯಿಂದ ವಂಚಿತವಾಗಿರುವವರಿಗೆ ಬಡ್ತಿ ನೀಡಿ ನ್ಯಾಯ ಒದಗಿಸಲು ಕ್ರಮ ಕೈಗೊಂಡಿರುವ ಬಗ್ಗೆ ಸ್ಪಷ್ಟನೆಯನ್ನು ರಾಜ್ಯಪಾಲರಿಗೆ ನೀಡಬಹುದು ಎಂಬ ಅಭಿಪ್ರಾಯ ಸರ್ಕಾರಕ್ಕೆ ನೀಡಲು ಚರ್ಚಿಸಲಾಯಿತು ಎಂದು ಹೇಳಲಾಗಿದೆ.