Advertisement

ಧರಣಿ ಕೈಬಿಡುವಂತೆ ಕೈಮುಗಿದ ಡಿಸಿ

04:25 PM Oct 17, 2018 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 12 ಜನ ಮಹಿಳೆ ಮತ್ತು ಒಂಬತ್ತು ಜನ ಪುರುಷ ಕಾರ್ಮಿಕರು ತಮ್ಮನ್ನು ಟೆಂಡರ್‌ ಅವಧಿ ಮುಗಿದ ಕಾರಣದಿಂದ ಕೆಲಸ ಬಿಡಿಸಿದ್ದನ್ನು ಮತ್ತು ನೇರ ನೇಮಕಾತಿಯಲ್ಲಿ ಕೈಬಿಟ್ಟಿದ್ದನ್ನು ವಿರೋಧಿಸಿ ಪುರಸಭೆ ಎದುರು ಅ. 11ರಿಂದ ಕೈಗೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ 7ಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ಈ ವೇಳೆ ಧರಣಿ ಕೈಬಿಡುವಂತೆ ಕೈಮುಗಿದು ಬೇಡಿಕೊಂಡರು.

Advertisement

ಕಳೆದ ಆರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಜಿಲ್ಲಾಧಿಕಾರಿಗಳು ಬರುತ್ತಿದ್ದಂತೆಯೇ ಎಲ್ಲರೂ ಅವರ ಕಾಲಿಗೆ ಬಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ನಿಮ್ಮ ಸಮಸ್ಯೆ ಬಗ್ಗೆ ಗೊತ್ತಿದ್ದು, ಇದು ಸಾರ್ವತ್ರಿಕ ಸಮಸ್ಯೆಯಾಗಿದೆ. ಇತ್ತೀಚಿನ ನೇಮಕಾತಿಯಲ್ಲಿ ತಮ್ಮನ್ನು ಕೈ ಬಿಟ್ಟಿರುವ ಬಗ್ಗೆ ನೀವು ಮಾಡುತ್ತಿರುವ ಪ್ರತಿಭಟನೆಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ. ತಾವು ಕಾರ್ಯ ನಿರ್ವಹಿಸಿದ ಕಾಲಾವಧಿಯಲ್ಲಿ ತಮ್ಮನ್ನು ಟೆಂಡರ್‌ ಮೂಲಕ ನೇಮಕ ಮಾಡಿಕೊಂಡವರು, ವೇತನ ಪಾವತಿಸಿದ ಇನ್ನೂ ಅನೇಕ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿ. ತಮ್ಮೆಲ್ಲ ಬೇಡಿಕೆಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಕೈಮುಗಿದು ನಡೆದರು.

ಉಪವಿಭಾಗಾಧಿಕಾರಿ ಪಿ. ಮಂಜುನಾಥ, ಜಿಲ್ಲಾ ನಗರ ಯೋಜನಾಧಿಕಾರಿ ಪಿ.ರುದ್ರೇಶ, ತಹಶೀಲ್ದಾರ್‌ ಕೆ.ಬಿ. ಕೋರಿಶೆಟ್ಟರ, ಮುಖಂಡರಾದ ಸುರೇಶ ನಂದೆಣ್ಣವರ, ಶರಣು ಗೋಡಿ, ನಾಗೇಶ ಅಮರಾಪುರ, ನೀಲಪ್ಪ ಪಡಗೇರಿ ಸೇರಿದಂತೆ ಅನೇಕರು ಇದ್ದರು. ಮಹಿಳಾ ಕಾರ್ಮಿಕರಾದ ಗಿರಿಜವ್ವ ನಂದೆಣ್ಣವರ, ಸಾವಕ್ಕ ಗಡದವರ, ಹನಮವ್ವ ಗಡದವರ, ಗಂಗವ್ವ ಅಯ್ಯಣ್ಣವರ, ಯಲ್ಲವ್ವ ಗಡದವರ, ಹನಮವ್ವ ನಂದೆಣ್ಣವರ, ಮಲ್ಲವ್ವ ಗಡದವರ, ಹನಮವ್ವ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next