Advertisement

ನರೇಗಾ ವೇಗ ಹೆಚ್ಚಿಸಲು ಪ್ರಾಜೆಕ್ಟ್- 100

09:46 PM Dec 25, 2019 | Lakshmi GovindaRaj |

ಜಿಲ್ಲೆಯ ಜಿಲ್ಲಾ ಪಂಚಾಯತ್‌ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ವೇಗ ಹೆಚ್ಚಿಸಲು ಪ್ರಾಜೆಕ್ಟ್-100 ಎಂಬ ನೂರು ದಿನಗಳ ವಿಶೇಷ ಅಭಿವೃದ್ಧಿ ಅಭಿಯಾನ ಕೈಗೆತ್ತಿಕೊಳ್ಳುವ ಮೂಲಕ ಗಮನ ಸೆಳೆದಿದೆ. ಗ್ರಾಮೀಣ ಭಾಗಕ್ಕೆ ಅದರಲ್ಲೂ ರೈತಾಪಿ ಕೂಲಿ ಕಾರ್ಮಿಕರು ವಾಸ ಮಾಡುವ ಹಳ್ಳಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಕೃಷಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಜಿಪಂ ಪ್ರಾಜೆಕ್ಟ್-100 ಯೋಜನೆ ರೂಪಿಸಿದೆ.

Advertisement

ರಸ್ತೆ, ನೈರ್ಮಲ್ಯ, ಶೌಚಾಲಯ, ಶಾಲೆಗಳಲ್ಲಿ ಮಕ್ಕಳ ಸುಭದ್ರತೆಗಾಗಿ ಕಾಂಪೌಂಡ್‌ ನಿರ್ಮಾಣ, ಚರಂಡಿಗಳ ಸ್ವಚ್ಛತೆ ಹಾಗೂ ವಿಶೇಷವಾಗಿ ಜಿಲ್ಲೆಯ ಬರ ನೀಗಿಸಲು ಅಂತರ್ಜಲ ವೃದ್ಧಿಗೆ ಪೂರಕವಾದ ಚೆಕ್‌ ಡ್ಯಾಂ ನಿರ್ಮಾಣ, ಕಲ್ಯಾಣಿಗಳ ಸ್ವಚ್ಛತೆ, ಮಳೆ ಕೊಯ್ಲು, ನಾಲಾ ಬದುಗಳ ಹಾಗೂ ಸರ್ಕಾರಿ ಕೊಳವೆ ಬಾವಿಗಳಿಗೆ ನೀರು ಮರುಪೂರಣಕ್ಕೆ ಮುಂದಾಗಿ ಗಮನ ಸೆಳೆದಿದೆ.

ಚಿಕ್ಕಬಳ್ಳಾಪುರ: ಮಿತಿ ಮೀರಿದ ಅಂತರ್ಜಲ ಬಳಕೆ ಪರಿಣಾಮ ವರ್ಷದಿಂದ ವರ್ಷಕ್ಕೆ ಮಳೆ ಬೆಳೆ ಕೊರತೆಯಾಗಿ ತೀವ್ರ ಬರ ಹಾಗೂ ಜಲಕ್ಷಾಮವನ್ನು ಜಿಲ್ಲೆ ಎದುರಿಸುತ್ತಿದೆ. ಜಿಲ್ಲೆಯಲ್ಲಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲಾದ್ಯಂತ ಅಂತರ್ಜಲ ವೃದ್ಧಿಸುವ ದಿಸೆಯಲ್ಲಿ ಜಲಮೂಲಗಳ ಪುನಶ್ಚೇತನ ಜೊತೆಗೆ ಸಂರಕ್ಷಣೆ ಹಾಗೂ ಮಳೆ ನೀರು ಸದ್ಬಳಕೆಗೆ ಜಿಪಂ, ಪ್ರಾಜೆಕ್ಟ್-100 ವಿನೂತನ ಅಭಿಯಾನ ಆರಂಭಿಸಿದೆ.

ಹೌದು, ಜಿಲ್ಲೆಯಲ್ಲಿ ಪುನಶ್ಚೇತನಗೊಳ್ಳದೇ ಯಥೇಚ್ಛಚವಾಗಿರುವ ಕೆರೆ, ಕುಂಟೆ, ರಾಜಕಾಲುವೆ, ಕಲ್ಯಾಣಿಗಳ ಸಂರಕ್ಷಣೆ ಜೊತೆ ಜೊತೆಯಲ್ಲಿ ಮಳೆ ನೀರನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಜಿಲ್ಲಾದ್ಯಂತ ನರೇಗಾ ಯೋಜನೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌, ರಾಜ್ಯದಲ್ಲಿ ಮಾದರಿಯಾಗಿ 100 ದಿನಗಳ ವಿಶೇಷ ಅಭಿವೃದ್ಧಿ ಅಭಿಯಾನದಡಿ ಪ್ರಾಜೆಕ್ಟ್-100 ರೂಪಿಸಿ ಅನುಷ್ಠಾನಕ್ಕೆ ಮುಂದಾಗಿದೆ.

5,143 ಕಾಮಗಾರಿ ಗುರಿ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಂರ್ತಜಲ ಮಟ್ಟವು ಸಹ ಪಾತಾಳಕ್ಕೆ ಕುಸಿದು ಕುಡಿಯುವ ನೀರು ವಿಷಮಯವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜಿಪಂ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಜಲಮೂಲಗಳ ಸಂರಕ್ಷಣೆ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ಮಹತ್ವಕಾಂಕ್ಷೆ ಹೊಂದಿ 100 ದಿನಗಳಲ್ಲಿ ಬರೋಬ್ಬರಿ 5,143 ವಿವಿಧ ಬಗೆಯ ಸಮುದಾಯ ಆಧಾರಿತ ಕಾಮಗಾರಿಗಳ ಅನುಷ್ಠಾನಗೊಳಿಸಲು ಜಿಲ್ಲೆಯ ಆರು ತಾಲೂಕುಗಳ ಪ್ರತಿ ಗ್ರಾಪಂಗೆ ಗುರಿ ನಿಗದಿಪಡಿಸಿದ್ದು, ಈಗಾಗಲೇ ಪ್ರಾಜೆಕ್ಟ್-100 ಅಭಿಯಾನ ಜಿಲ್ಲಾದ್ಯಂತ ಚಾಲನೆ ಪಡೆದಿದೆ.

Advertisement

5,143 ಕಾಮಗಾರಿಗಳ ಪೈಕಿ ಆರು ತಾಲೂಕುಗಳಲ್ಲಿ ಒಟ್ಟು 24 ನಾಲಾ ಬದು ನಿರ್ಮಾಣ, 121 ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ, 1,041 ಸರ್ಕಾರಿ ಕೊಳವೆ ಬಾವಿಗಳ ಜಲ ಮರುಪೂರುಣ ಘಟಕಗಳ ನಿರ್ಮಾಣ, 1,361 ಮಳೆ ಕೊಯ್ಲು ನಿರ್ಮಾಣ, 1,289 ಕೆರೆ, ಕುಂಟೆಗಳ ಪೋಷಕ ಕಾಲುವೆಗಳ ಸಮಗ್ರ ಪುನಶ್ಚೇತನ ಹಾಗೂ 1068 ಜಾನುವಾರುಗಳಿಗೆ ಕುಡಿಯುವ ನಿರಿನ ತೊಟ್ಟಿಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. 239 ಶಾಲೆಗಳಿಗೆ ಸುತ್ತಲೂ ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.

ನರೇಗಾ ಯೋಜನೆಗೆ ವೇಗ: ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಝಿಯಾ ತರುನ್ನುಮ್‌ರವರ ವಿಶೇಷ ಪ್ರಯತ್ನದಿಂದ ಜಿಲ್ಲಾದ್ಯಂತ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕೂಲಿ ಕಾರ್ಮಿಕ ವರ್ಗದ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರಾಜೆಕ್ಟ್-100 ರೂಪಿಸಿದ್ದು, ಗ್ರಾಮೀಣ ಭಾಗದ ನೂರಾರು ಕುಟುಂಬಗಳಿಗೆ ಈ ಯೋಜನೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಈ ಕಾರ್ಯಕ್ರಮ ಸಾಕಷ್ಟು ಅನುಕೂಲ ಕಲ್ಪಿಸಲಿದೆ.

ವಿಶೇಷವಾಗಿ ಜಿಲ್ಲೆಯಲ್ಲಿ ಸುಮಾರು 1,608 ಕೆರೆಗಳಿದ್ದು ಆ ಪೈಕಿ ಪಂಚಾಯತ್‌ ರಾಜ್‌ ಇಲಾಖೆಯಡಿ 1,402 ಕೆರೆಗಳಿದ್ದರೆ ಸುಮಾರು 206 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿವೆ. ಈ ಎಲ್ಲಾ ಕೆರೆಗಳನ್ನು ದುರಸ್ತಿಪಡಿಸಿ ಮಳೆ ನೀರು ಸಂಗ್ರಹವಾಗುವ ಅಡ್ಡಿ, ಆತಂಕವಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳ ಅಭಿವೃದ್ಧಿ ಗುರಿಯನ್ನು ಈ ಪ್ರಾಜೆಕ್ಟ್-100 ರಲ್ಲಿ ಹೊಂದಲಾಗಿದೆ.

ಜಿಲ್ಲೆಯಲ್ಲಿ ಪ್ರಾಜೆಕ್ಟ್ – 100 ದಿನಗಳ ನರೇಗಾ ಕಾರ್ಯಕ್ರಮವು ಜಿಲ್ಲೆಯ ಅಭಿವೃದ್ಧಿಗೆ ರೂಪಿಸಿರುವ ವಿಶೇಷ ಅಭಿಯಾನ ಆಗಿದೆ. ಒಟ್ಟು 5,143 ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು, ಅಂದಾಜು 40 ರಿಂದ 50 ಕೋಟಿ ರೂ. ವೆಚ್ಚದ ಗುರಿ ಇದೆ ಎಂದು ಜಿಪಂ ಸಿಇಒ ಬಿ.ಫೌಝಿಯಾ ತರುನ್ನುಮ್‌ ತಿಳಿಸಿದ್ದಾರೆ.

ವಿಶೇಷವಾಗಿ ನರೇಗಾ ಯೋಜನೆಯಡಿ ಬಡ ಕುಟುಂಬಗಳಿಗೆ ಕೂಲಿ ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲು ಅನುಕೂಲವಾಗುವಂತೆ ಜಲಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಒತ್ತು ನೀಡಲಾಗಿದೆ. ಇದಕ್ಕೆ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ತಾಂತ್ರಿಕ ವರ್ಗದವರ ಶ್ರಮ ಮತ್ತು ಬದ್ಧತೆ, ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ 4,58,286 ಮಂದಿಗೆ ನರೇಗಾ ಚೀಟಿ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಬರೋಬ್ಬರಿ 1,83,639 ಕುಟುಂಬಗಳು ನೋಂದಣಿ ಮಾಡಿಸಿಕೊಂಡಿದ್ದು ಒಟ್ಟು 4,58,286 ಮಂದಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿಗಳನ್ನು ಪಡೆದುಕೊಂಡಿದ್ದಾರೆ. ಬಾಗೇಪಲ್ಲಿ ತಾಲೂಕಿನಲ್ಲಿ 39,322 ಕುಟುಂಬಗಳಲ್ಲಿ ಒಟ್ಟು 86,947 ಮಂದಿ ಉದ್ಯೋಗ ಚೀಟಿ ಪಡೆದರೆ,

ಚಿಕ್ಕಬಳ್ಳಾಪುರ ತಾಲೂಕಲ್ಲಿ 22,128 ಕುಟುಂಬಗಳ ಒಟ್ಟು 58,841 ಮಂದಿ, ಚಿಂತಾಮಣಿಯಲ್ಲಿ ಒಟ್ಟು 42,172 ಕುಟುಂಬಗಳ ಒಟ್ಟು 1,07,692 ಮಂದಿ, ಗೌರಿಬಿದನೂರು ತಾಲೂಕಿನಲ್ಲಿ 41,342 ಕುಟುಂಬಗಳ ಒಟ್ಟು 1,04,646 ಮಂದಿ, ಗುಡಿಬಂಡೆಯಲ್ಲಿ 11,633 ಕುಟುಂಬಗಳ 31,220 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 27,042 ಕುಟುಂಬಗಳಲ್ಲಿ ಒಟ್ಟು 68,940 ಮಂದಿ ಸೇರಿ ಜಿಲ್ಲಾದ್ಯಂತ 1,83,639 ಕುಟುಂಬಗಳ ಒಟ್ಟು 4,58,286 ಮಂದಿಗೆ ನರೇಗಾದಡಿ ಉದ್ಯೋಗ ಚೀಟಿ (ಜಾಬ್‌ ಕಾರ್ಡ್‌) ವಿತರಿಸಲಾಗಿದೆ.

ಜಿಲ್ಲಾದ್ಯಂತ ಪ್ರಾಜೆಕ್ಟ್ 100 ದಿನಗಳ ವಿಶೇಷ ಅಭಿವೃದ್ಧಿ ಅಭಿಯಾನವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಪೋಷಕ ಕಾಲುವೆ ನಿರ್ಮಾಣ, ಗ್ರಾಮ, ತಾಲೂಕು ಪಂಚಾಯತ್‌ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಪೋಷಕ ಕಾಲುವೆಗಳ ಸರ್ವೆ ನಡೆಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಶಾಲೆಗಳಲ್ಲಿ ಕಾಂಪೌಂಡ್‌ ನಿರ್ಮಾಣ, ನೀರು ಮರು ಪೂರ್ಣ ಘಟಕಗಳ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ.
-ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷರು

ಪ್ರಾಜೆಕ್ಟ್-100 ತಾಲೂಕುವಾರು ಕಾಮಗಾರಿಗಳ ಗುರಿ
ತಾಲೂಕು ನಾಲಾ ಬದು ನೀರಿನ ತೊಟ್ಟಿ ಶಾಲೆ ಕಾಂಪೌಂಡ್‌ ಮಳೆ ಕೊಯ್ಲು ಕಲ್ಯಾಣಿ ಪುನಶ್ಚೇತನ
ಬಾಗೇಪಲ್ಲಿ 5 152 77 578 11
ಚಿಕ್ಕಬಳ್ಳಾಪುರ 2 132 17 61 18
ಚಿಂತಾಮಣಿ 5 165 60 262 41
ಗೌರಿಬಿದನೂರು 5 200 25 100 29
ಗುಡಿಬಂಡೆ 5 107 22 95 7
ಶಿಡ್ಲಘಟ್ಟ 2 312 38 265 15

ತಾಲೂಕು ಪೋಷಕ ಕಾಲುವೆ ಅಭಿವೃದ್ಧಿ ಸರ್ಕಾರಿ ಕೊಳವೆ ಬಾವಿ ಮರುಪೂರಣ
ಬಾಗೇಪಲ್ಲಿ 341 390
ಚಿಕ್ಕಬಳ್ಳಾಪುರ 103 120
ಚಿಂತಾಮಣಿ 454 185
ಗೌರಿಬಿದನೂರು 94 90
ಗುಡಿಬಂಡೆ 80 60
ಶಿಡ್ಲಘಟ್ಟ 217 196

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next