ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಆ. 12, 13ರಂದು 45ನೇ ಸರಣಿ-ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಪ್ರಾಜೆಕ್ಟ್ಗಳ ಸೆಮಿನಾರ್-ಪ್ರದರ್ಶನ ನಡೆಯಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್. ಹೇಮಂತ್‌ಕುಮಾರ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಆ. 12ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ. ಅಶೋಕ ರಾಯಚೂರ ಆಗಮಿಸುವರು. ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸುವರು.
ಆ. 13ರಂದು ಮಧ್ಯಾಹ್ನ 12ಕ್ಕೆ ಪ್ರೊ. ಅಮೃತೂರು ಭಾರದ್ವಾಜ ತಾಂತ್ರಿಕ ಉಪನ್ಯಾಸ ನೀಡುವರು. 2:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಗುರುತಿಸುವುದು, ಇವೆರಡೂ ಕ್ಷೇತ್ರಗಳಿಗೆ ಸಂಬಂಧಿಸಿ ನೀತಿ-ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದೇ ನಮ್ಮ ಉದ್ದೇಶ. 1978ರಿಂದ ಇಂತಹ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಕೈಗಾರಿಕೆ, ಮಾಹಿತಿ, ಕೃಷಿ, ನೀರು, ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿಮೂಲಗಳು, ಶಿಕ್ಷಣ ಮುಂತಾದ ವಿಷಯಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮುಖ್ಯ ಕಾರ್ಯಕ್ಷೇತ್ರವನ್ನಾಗಿ ಮಂಡಳಿ ಆಯ್ಕೆ ಮಾಡಿಕೊಂಡಿದೆ. ಹಲವಾರು ಯೋಜನೆಗಳನ್ನು ಸಂಶೋಧನೆ ಮತ್ತು ಪ್ರಾತ್ಯಕ್ಷಿಕ ಹಂತದಿಂದ ಕಾರ್ಯರೂಪಕ್ಕೆ ತಂದಿದೆ ಎಂದು ವಿವರಿಸಿದರು. ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳನ್ನು ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿಸುವುದೇ ನಮ್ಮ ಗುರಿ ಎಂದರು.
ವಿಟಿಯುನಲ್ಲಿ ಪ್ರಾಜೆಕ್ಟ್ಗಳ ಪ್ರದರ್ಶನಕ್ಕೆ ರಾಜ್ಯದ 170 ಎಂಜಿನಿಯರಿಂಗ್ ಕಾಲೇಜುಗಳಿಂದ 5,191 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 1,230 ಪ್ರಾಜೆಕ್ rಗಳಿಗೆ ಧನಸಹಾಯ ಹಾಗೂ ತಾಂತ್ರಿಕ ನೆರವು ನೀಡಲಾಗಿದೆ. ಅನುಭವಿಗಳ ತಂಡ ಮೌಲ್ಯಮಾಪನ ನಡೆಸಿ, ಅತ್ಯುತ್ತಮವಾದ 190 ಪ್ರಾಜೆಕ್ಟ್ಗಳನ್ನು ಪ್ರದರ್ಶನಕ್ಕೆ ಹಾಗೂ 142 ಪ್ರಾಜೆಕ್ಟ್ ಗಳನ್ನು ಸೆಮಿನಾರ್ ಗೆ ಆಯ್ಕೆ ಮಾಡಿದೆ. ಎಂಜಿನಿಯರಿಂಗ್ ಕಾಲೇಜಿನ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, 120ಕ್ಕೂ ಅಧಿಕ ಉಪನ್ಯಾಸಕರು ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದಂತೆ ಇತರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ 50 ಪರಿಣಿತರು ಭಾಗವಹಿಸುವರು ಎಂದು ತಿಳಿಸಿದರು. ವಿಟಿಯು ಕುಲಸಚಿವ ಪ್ರೊ. ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಈ. ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.