ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಪ್ರಕರಣ ಸಂಬಂಧ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯಸರ್ಕಾರ ನೀಡಿದ್ದ ಪ್ರಾಸಿಕ್ಯೂಶನ್ ಅನುಮತಿ ಆದೇಶ ಹಾಗೂ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಕುರಿತು ಕಲ್ಕಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಮುಂದಿನ ಕಾನೂನು ಕ್ರಮಗಳಿಗೆ ತಡೆಯಾಜ್ಞೆ ನೀಡಿ ಪ್ರತಿವಾದಿಗಳಾದ, ರಾಜ್ಯ ಸರ್ಕಾರ, ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಪಿಎಫ್ಐ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಸದಸ್ಯ ಆಶ್ರಪ್‌ಗೆ ನೋಟಿಸ್ ಜಾರಿಗೊಳಿಸಿತು.
ಪ್ರಭಾಕರ್ ಭಟ್ ಪರವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ರಾಷ್ಟ್ರೀಯ ಐಕ್ಯತೆಗೆ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂವಿಧಾನದ ವಾಕ್‌ಸ್ವಾತಂತ್ರದ ಅಡಿಯಲ್ಲಿ ಭಾಷಣ ಮಾಡಿದ್ದಾರೆಯೇ ವಿನಃ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಹೀಗಿದ್ದರೂ ದುರುದ್ದೇಶಪೂರ್ವಕವಾಗಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದರಿಂದ ಅರ್ಜಿದಾರರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದರು.
ವಾದ ಪುರಸ್ಕರಿಸಿದ ನ್ಯಾಯಪೀಠ, ಪ್ರಭಾಕರ್ ಭಟ್ ವಿರುದ್ಧದ ಪ್ರಾಸಿಕ್ಯೂಶನ್ ಅನುಮತಿ ಆದೇಶ ಹಾಗೂ ಮುಂದಿನ
ಕಾನೂನು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.