Advertisement

ರೈತರ ಏಳ್ಗೆಯಾದರೆ ದೇಶದ ಪ್ರಗತಿ

01:07 PM Apr 27, 2022 | Kavyashree |

ಲಕ್ಶ್ಮೇಶ್ವರ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಬದುಕುತ್ತಿರುವ ರೈತರ ಏಳ್ಗೆಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಹೇಳಿದರು.

Advertisement

ಸಮೀಪದ ಗೊಜನೂರು ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆ ರಾಜ್ಯ ಘಟಕದಿಂದ ಗದಗ ಜಿಲ್ಲಾಮಟ್ಟದ ರೈತ ಸಮಾವೇಶ ಮತ್ತು ಮುಂಗಾರು ಪೂರ್ವ ರೈತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತರ ಬದುಕು ಹಸನಾಗಲು ಕೃಷಿ ಸಂಬಂಧಿತ ಸೌಲತ್ತು, ಯೋಜನೆಗಳು ಅರ್ಹ ರೈತರಿಗೆ ತಲುಪುವಂತಾಗಬೇಕು. ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ರಾಸಾಯನಿಕ ಕೃಷಿಯಿಂದ ವಿಮುಖರಾಗಿ ಸಾವಯವ ಕೃಷಿಗೆ ಮಹತ್ವ ನೀಡಬೇಕು. ಭೂಮಿಯ ಫಲವತ್ತತೆ, ಅಂತರ್ಜಲ ಮಟ್ಟ ಸುಧಾರಣೆ, ಮಣ್ಣು ಸವಕಳಿ ಕ್ರಮಗಳನ್ನು ಕೈಗೊಳ್ಳಬೇಕು. ಸಮಾಜದಲ್ಲಿ ರೈತರಿಗೆ ಗೌರವ ಸ್ಥಾನಮಾನ ಸಿಗುವಂತಾಗಿ ಯುವಕರು ಕೃಷಿಯತ್ತ ಚಿತ್ತ ಹರಿಸುವಂತಾಗಬೇಕು ಎಂದರು.

ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವ ನಾಣ್ನುಡಿಯಂತೆ ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅತಿವೃಷ್ಟಿ, ಅನಾವೃಷ್ಟಿಯ ಜತೆಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಆದರೆ ಅವರ ಬೆಂಬಲಕ್ಕೆ ಯಾವುದೇ ಸರಕಾರಗಳು ನಿಲ್ಲುತ್ತಿಲ್ಲ. ಕೃಷಿಗೆ ಅಗತ್ಯವಾದ ಹೂಡಿಕೆಗಳು, ಸಲಕರಣೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ರೈತರಿಗೆ ಶಿಕ್ಷಣ ನೀಡುವುದು ಸಹ ಅಗತ್ಯವಾಗಿದೆ. ಸರ್ಕಾರವು ಕಾಲಕಾಲಕ್ಕೆ ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಅವು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಬೆಂಬಲ ಬೆಲೆ, ಪರಿಹಾರಧನ, ವಿಮೆ, ಕೃಷಿ ನೀತಿಗಳು ಕೇವಲ ಘೋಷಣೆಗೆ ಸೀಮಿತ ಎಂದು ಆರೋಪಿಸಿದರು.

ದೇಶಕ್ಕೆ ರೈತರ ಕೊಡುಗೆ ಏನು ಎನ್ನುವುದನ್ನು ತಿಳಿಸುವ ಕಾರ್ಯವನ್ನು ರೈತ ಸಂಘಟನೆಗಳು ತಿಳಿಸುವ ಕಾರ್ಯ ಮಾಡಬೇಕಾಗಿದೆ. ರೈತರು ಕೃಷಿಯಿಂದ ವಿಮುಖರಾಗದೆ ಆಧುನಿಕತೆಯನ್ನು ತೊಡಗಿಸಿಕೊಂಡು ಕೃಷಿಯಲ್ಲಿ ಮುಂದುವರೆಯಬೇಕು. ಗೊಜನೂರು ಗ್ರಾಮದ ಕೃಷಿಕ ಸಮಾಜದವರು ಕೃಷಿ ವಿಜ್ಞಾನಿಗಳ ಮೂಲಕ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

Advertisement

ಸಭೆ ಸಾನ್ನಿಧ್ಯವನ್ನು ಚನ್ನವೀರಯ್ಯನವರು ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಘಟಕ ಅಧ್ಯಕ್ಷ ಅಶೋಕ ಸೊರಟೂರ ವಹಿಸಿದ್ದರು.

ವೇದಿಕೆಯಲ್ಲಿ ಕೃಷಿಕ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಮಹಾಂತೇಶ ತೊಟಗಿ, ಉಪಾಧ್ಯಕ್ಷ ಬಸವರಾಜ ಸಜ್ಜನರ, ಬಸಲಿಂಗಪ್ಪ ಮಲ್ಲೂರ, ಚಂದ್ರಪ್ಪ ಹೊಸಮನಿ, ಜಯಶ್ರೀ, ಚಂದ್ರಗೌಡ ಪಾಟೀಲ, ಸಿ.ಪಿ. ಮಾಡಳ್ಳಿ, ಬಿ.ಎಂ. ಕಾತ್ರಾಳ, ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖೀ, ಗ್ರಾ.ಪಂ. ಅಧ್ಯಕ್ಷೆ ನೀಲವ್ವ ಪಾಟೀಲ ಹಾಗೂ ಸದಸ್ಯರು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಅನೇಕ ರೈತ ಮುಖಂಡರು, ರೈತರು ಕಾರ್ಯಕ್ರಮದಲ್ಲಿದ್ದರು.

ಚಂದ್ರಗೌಡ ದೊಡ್ಡಗೌಡ್ರ, ದ್ಯಾಮನಗೌಡ ಪಾಟೀಲ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಕೃಷಿಕ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಕೃಷಿ ರತ್ನ ಪ್ರಶಸ್ತಿಯನ್ನು ಮಾಗಡಿಯ ಪರಪ್ಪ ಶಿವಶಿಂಪರ ಮತ್ತು ಮುಳಗುಂದದ ಮಂಗಳಾ ಕೆ. ನೀಲಗುಂದ ಅವರಿಗೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next