Advertisement

ಬೆಳ್ಮಣ್‌: ಟೋಲ್‌ ವಿರೋಧಿಸಿ ಬೃಹತ್‌ ಪ್ರತಿಭಟನೆ

09:57 AM Dec 21, 2018 | |

ಬೆಳ್ಮಣ್‌: ಕಾರ್ಕಳ-ಪಡುಬಿದ್ರಿ ಹೆದ್ದಾರಿಯ ಬೆಳ್ಮಣ್‌ನಲ್ಲಿ ಟೋಲ್‌ಗೇಟ್‌ ತೆರೆಯುವ ಕ್ರಮವನ್ನು ವಿರೋಧಿಸಿ ಗುರುವಾರ ಕಾರ್ಕಳ-ಪಡುಬಿದ್ರಿ ಹೆದ್ದಾರಿ ಬಂದ್‌ ಮತ್ತು ಬೃಹತ್‌ ಪ್ರತಿಭಟನ ಮೆರವಣಿಗೆ ನಡೆಯಿತು.

Advertisement

ಬೆಳ್ಮಣ್‌ ಚರ್ಚ್‌ ಬಳಿಯ ಪೆಟ್ರೋಲ್‌ ಬಂಕ್‌ ವರೆಗೆ ಸಾಗಿ ಹಿಂದೆ ಬಂದ ಮೆರವಣಿಗೆ ನಂದಳಿಕೆ ಬೋರ್ಡ್‌ ಶಾಲೆಯವರೆಗೆ ಸಾಗಿ ಬಸ್‌ ನಿಲ್ದಾಣಕ್ಕೆ ವಾಪಸಾಯಿತು. 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಟೋಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 27 ಗ್ರಾಮಗಳ ಲಕ್ಷಾಂತರ ಮಂದಿ ಜತೆಯಾಗಿದ್ದೇವೆ. ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ಅವಕಾಶ ನೀಡೆವು; ರಕ್ತ ಕೊಟ್ಟಾದರೂ ತಡೆಯುತ್ತೇವೆ ಎಂದು ಪ್ರತಿಭಟನಕಾರರು ಹೇಳಿದರು.

ಬಸ್‌ ನಿಲ್ದಾಣದಲ್ಲಿ  ನಡೆದ ಪ್ರತಿಭಟನ ಸಭೆಯಲ್ಲಿ ಟೋಲ್‌ಗೇಟ್‌ ವಿರೋಧಿ ಸಂಘಟನೆ ಸಂಚಾಲಕ ನಂದಳಿಕೆ ಸುಹಾಸ್‌ ಹೆಗ್ಡೆ ಮಾತನಾಡಿ, ಶಾಂತಿಯುತ ಪ್ರತಿಭಟನೆಗಳಿಗೆ ಸರಕಾರ ಬೆಲೆ ನೀಡುವಂತೆ ಕಾಣುತ್ತಿಲ್ಲ; ಟೋಲ್‌ ಆರಂಭಕ್ಕೆ ತೆರೆಮರೆಯ ಸಿದ್ಧತೆ ನಡೆಯುತ್ತಿದೆ. ನಾಗರಿಕರನ್ನು ಅವಗಣಿಸುವ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈ ರಸ್ತೆ ನಿರ್ಮಾಣವಾಗಿ 4 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ನಾವು ನೀಡಿದ್ದ ತೆರಿಗೆಗಳನ್ನು ಮೊದಲು ಹಿಂದಿರುಗಿಸಿ; ಅದರ ಹೊರತು ಯಾವುದೇ ಕಾರಣಕ್ಕೂ ಟೋಲ್‌ ಪ್ರಾರಂಭಿಸಲು ಬಿಡೆವು ಎಂದರು. ಪತ್ರಕರ್ತ ಶ್ರೀಕಾಂತ ಶೆಟ್ಟಿ, ಸಮಿತಿಯ ಸರ್ವಜ್ಞ ತಂತ್ರಿ, ಶಶಿಧರ ಶೆಟ್ಟಿ, ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ನ ರಮೇಶ್‌, ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಮಾತನಾಡಿದರು.

ಮನವಿ ಸ್ವೀಕರಿಸಿದ ಎಡಿಸಿ


ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಪ್ರತಿಭಟನ ನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿ, ಈ ಟೋಲ್‌ ವ್ಯವಸ್ಥೆಯ ಹಿಡಿತ ಜಿಲ್ಲಾಡಳಿತದ ಕೈಯಲ್ಲಿಲ್ಲ, ಸಾರ್ವಜನಿಕರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

Advertisement

ಟೋಲ್‌ ದೌರ್ಭಾಗ್ಯ: ಕೇಮಾರು ಶ್ರೀ
ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟಲದಾಸ ಸ್ವಾಮೀಜಿ ಅವರು ಮಾತನಾಡಿ, ನಮ್ಮನ್ನಾಳುವ ಸರಕಾರಗಳು ವಿವಿಧ ಭಾಗ್ಯಗಳ ಮೂಲಕ ಪ್ರಚಾರ ಪಡೆಯುತ್ತಿದ್ದು ಇದೀಗ “ಟೋಲ್‌ ಭಾಗ್ಯ’ ಎಂಬ ದೌರ್ಭಾಗ್ಯ ನೀಡಿ ವಂಚಿಸುತ್ತಿವೆ ಎಂದರು. ಯಾರೋ ನೀಡುವ ತಳ್ಳಿ ಅರ್ಜಿಗಳಿಗೆ ಸ್ಪಂದಿಸಿ ದಿನ ಬೆಳಗಾಗುವುದರೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಜಿಲ್ಲಾಡಳಿತ ಅಥವಾ ಅಧಿಕಾರಿಗಳು ಸಹಸ್ರಾರು ಮಂದಿ ನೀಡಿದ ಈ ಟೋಲ್‌ ವಿರುದ್ಧದ ಮನವಿಗೆ ಸ್ಪಂದಿಸದಿರುವುದು ವಿಪರ್ಯಾಸ ಎಂದರು.

ಅವಿಭಜಿತ ದ.ಕ. ಜಿಲ್ಲೆ ವಿವಿಧ ಕಾರ್ಖಾನೆಗಳಿಂದ ತುಂಬಿದ ಕಸದ ಬುಟ್ಟಿಯಂತಾಗಿದೆ, ಸ್ಥಳೀಯರಿಗೆ ಇಲ್ಲಿ ಉದ್ಯೋಗ ಇಲ್ಲ, ನಮಗೆ ಹೊಗೆಯ ಪ್ರಸಾದ ಮಾತ್ರ ಎಂದು ಲೇವಡಿ ಮಾಡಿದ ಶ್ರೀಗಳು, ಈಗಾಗಲೇ ಟೋಲ್‌ಗೇಟ್‌ಗಳಿಂದ ತುಂಬಿ ಹೋಗಿರುವ ನಮ್ಮ ಜಿಲ್ಲೆಗೆ ಮತ್ತೂಂದು ಟೋಲ್‌ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next