ಸಿಹಿತಿನಿಸು ಎಂದರೆ ಯಾರಿಗೆ ತಾನೇ ಇಷ್ಟವಾಗದು? ವಿಶೇಷವಾಗಿ ಮಕ್ಕಳು ಅತಿಯಾಗಿ ಇಷ್ಟಪಡುವ ಚಾಕಲೇಟ್ ಅಥವಾ ಸಿಹಿತಿನಿಸು ಬಾಯಿಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದನ್ನು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಮತ್ತು ಬಾಯಿಯ ಆರೋಗ್ಯಕ್ಕೆ ಹಿತಕರ ಎಂಬುದನ್ನು ನೋಡೋಣ.
ಅತಿಯಾದರೆ ಅಮೃತವೂ ವಿಷವಂತೆ, ಹಾಗೆ ಚಾಕೊಲೇಟ್ ಅಥವಾ ಸಿಹಿತಿನಿಸು ಸಹ ಹಿತಮಿತವಾಗಿದ್ದರೆ ಯಾವುದೇ ತೊಂದರೆಯೂ ಉಂಟಾಗುವುದಿಲ್ಲ. ಇಂದು ಮಾರುಕಟ್ಟೆಗಳಲ್ಲಿ ಹಲವು ಬಗೆಗಳ ಚಾಕೊಲೇಟ್ ಅಥವಾ ಸಿಹಿತಿನಿಸುಗಳು ದೊರೆಯುತ್ತವೆ. ಹೆಚ್ಚು ಸಿಹಿಯಾದ ಮತ್ತು ಸಕ್ಕರೆಯಿಂದ ತಯಾರಿಸಲಾದ ಚಾಕೊಲೇಟುಗಳು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.
ಸಕ್ಕರೆಯುಕ್ತ ಚಾಕೊಲೇಟನ್ನು ತಿನ್ನುವುದರಿಂದ ಬಾಯಿಯಲ್ಲಿನ ಸಕ್ಕರೆಯ ಪ್ರಮಾಣವೂ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಕವಾಗಿ ಪ್ಲ್ಯಾಕ್ನ (ಬ್ಯಾಕ್ಟೀರಿಯಾ ವೃದ್ಧಿಯಾಗಲು ಅವಕಾಶ ಕೊಡುವಂತಹ ಹಲ್ಲಿನ ಮೇಲಿನ ಲೋಳೆಯ ನಿಕ್ಷೇಪ) ರಚನೆಗೆ ಪುಷ್ಟಿ ನೀಡುತ್ತದೆ. ಅಲ್ಲದೆ ಬಾಯಿಯ ಆಮ್ಲೀಯತೆಯನ್ನು ಹೆಚ್ಚಾಗಿಸಿ ಹಲ್ಲಿನ ಮೇಲಿರುವ ಎನಾಮಲ್ ಅನ್ನು ನಷ್ಟಗೊಳಿಸಿ ಹುಳುಕಾಗುವಂತೆ ಮಾಡುತ್ತದೆ. ಹಾಗಾದರೆ ಚಾಕಲೇಟ್ ಅಥವಾ ಸಿಹಿಪದಾರ್ಥಗಳನ್ನು ತಿನ್ನಲೇಬಾರದೇ? ಹೀಗೆ ಹೇಳುವುದು ತಪ್ಪಾಗುತ್ತದೆ. ಸಕ್ಕರೆಯುಕ್ತ ಚಾಕೊಲೇಟ್ ಅಥವಾ ಸಿಹಿತಿನಿಸು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ಯಾವಾಗಲೂ ಊಟದ ಜೊತೆಯಲ್ಲೇ ತಿನ್ನುವುದು ಸೂಕ್ತ. ಅಲ್ಲದೆ ತಿಂದ ತಕ್ಷಣ ಬಾಯಿಯನ್ನು ಶುಚಿಗೊಳಿಸಿಕೊಳ್ಳಬೇಕು. ಇದರಿಂದ ಹಲ್ಲುಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ.
ಮಕ್ಕಳ ಹಲ್ಲುಗಳು ಹುಳುಕಾಗುವುದಕ್ಕೆ – ಸಿಹಿಪದಾರ್ಥಗಳಾದ ಬಿಸ್ಕತ್ತ, ಚಾಕೊಲೇಟ್ ಅಥವಾ ಚಿಪ್ಸ್ನಂತಹ ಜಿಗುಟಾದ ಆಹಾರಗಳು ಪ್ರಮುಖ ಕಾರಣ. ಜಿಗುಟಾದ ಸಿಹಿಪದಾರ್ಥಗಳು ಹಲ್ಲುಗಳ ಸಂದುಗಳಲ್ಲಿ ಸೇರಿಕೊಂಡು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ವಿುಸುತ್ತವೆ. ಆದ್ದರಿಂದ ಯಾವುದೇ ರೀತಿಯ ಚಾಕೊಲೇಟ್, ಸಿಹಿತಿನಿಸುಗಳು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ತಿಂದ ನಂತರ ಬಾಯಿಯನ್ನು ಶುಚಿಗೊಳಿಸಿಕೊಳ್ಳುವುದರ ಮೂಲಕ ಹಲ್ಲುಗಳು ಹುಳುಕಾಗದ ಹಾಗೆ ನೋಡಿಕೊಳ್ಳಬಹುದು.
ಹಲ್ಲಿನ ಕಲೆಗಳಲ್ಲಿ ಬಾಹ್ಯ ಹಾಗೂ ಆಂತರಿಕ ಎಂದು ಎರಡು ಬಗೆಗಳಿವೆ. ಆಂತರಿಕ ಕಲೆಗಳು ಹಲ್ಲಿನ ಒಳಭಾಗದಿಂದ ಉಂಟಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಫ್ಲೋರೈಡ್ ಕಲೆಗಳು ಅಥವಾ ಹಲ್ಲಿನಲ್ಲಿ ಆಂತರಿಕ ರಕ್ತಸ್ರಾವ ಉಂಟಾದಾಗ – ಹೀಗೆ ಹಲವು ಬಗೆ. ಇನ್ನು ಬಾಹ್ಯ ಕಲೆಗಳು ಹಲ್ಲಿನ ಮೇಲ್ಮೈಯಲ್ಲಿ ಉಂಟಾಗುತ್ತವೆ. ಇದು ಸಾಮಾನ್ಯವಾಗಿ ತಂಬಾಕು ಬಳಕೆಯಿಂದ, ಅತಿಯಾಗಿ ಕಾಫಿ ಅಥವಾ ಚಹಾ ಕುಡಿಯುವುದರಿಂದ ಮತ್ತು ಆಮ್ಲೀಯ ಪಾನೀಯಗಳಿಂದಲೂ ಉಂಟಾಗುತ್ತವೆ. ಯಾವ ರೀತಿಯ ಕಲೆಗಳಿವೆ ಎಂದು ಪರೀಕ್ಷಿಸಿ ತಕ್ಕ ಚಿಕಿತ್ಸೆಯನ್ನು ಪಡೆಯಬಹುದು.