ಮೈಸೂರು: ಕಾರ್ಮಿಕರು ಮತ್ತು ಮಾಲೀಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಸಂಘದ ಮುಖಂಡರು ಹಾಗೂ ಮಾಲೀಕರು ಒಟ್ಟಾಗಿ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಎನ್.ಎಂ.ರವಿ ಸಲಹೆ ನೀಡಿದರು. ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ಇಎಸ್‌ಐ ಹಾಗೂ ಪಿಎಫ್ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಹಕ್ಕುಗಳ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ದೇಶದ ಸಂಪತ್ತು ಅವರಿಲ್ಲದೇ ಯಾವುದೇ ಕಾರ್ಯಗಳು ನಡೆಯಲಾರವು. ಹಿಂದೆ ಬಂಡವಾಳಶಾಹಿ ಪದ್ಧತಿ ರೂಢಿಯಲ್ಲಿದ್ದಾಗ ಬಂಡವಾಳಗಾರರೇ ನಿಜವಾದ ಪ್ರಭುಗಳಾಗಿದ್ದರು, ಕಾರ್ಮಿಕರನ್ನು ದುಡಿಯುವ ವರ್ಗವೆಂದೇ ಭಾವಿಸಲಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ನೌಕರರು ಮತ್ತು ಬಂಡವಾಳಶಾಹಿಗಳು ಇಬ್ಬರಿಗೂ ಸಮಾನ ಹಕ್ಕುಗಳಿವೆ ಎಂದರು.
ಹಕ್ಕು ಮತ್ತು ಬಾದ್ಯತೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಮಿಕರು ತಮ್ಮ ಬಾದ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಕಾಣಲು ಸಾಧ್ಯ. ಇದನ್ನು ಬಿಟ್ಟು ತಮ್ಮ ಹಕ್ಕುಗಳಿಗೆ ಮಾತ್ರ ಹೋರಾಟ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಕಾರ್ಮಿಕರು ತಮ್ಮ ಹಿತರಕ್ಷಣೆಗಾಗಿ ಸಂಘಗಳನ್ನು ರಚಿಸಿಕೊಂಡು ಇವುಗಳ ಮೂಲಕ ತಮಗೆ ಕಾರ್ಖಾನೆ ಅಥವಾ ಕೈಗಾರಿಕೆಗಳ ಮಾಲೀಕರಿಂದ ತೊಂದರೆ ಉಂಟಾದಲ್ಲಿ ಅದನ್ನು ಪ್ರತಿಭಟಿಸಲು ಮುಂದಾಗುತ್ತಾರೆ. ಇದಕ್ಕೂ ಮುನ್ನ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸುವುದರ ಮೂಲಕ ಮಾಲೀಕರಿಗೆ ಮುಷ್ಕರದ ಬಗ್ಗೆ ಮುಂಚಿತವಾಗಿ ತಿಳಿವಳಿಕೆ ನೀಡುವುದು ಅವಶ್ಯ.
ಕಾರ್ಮಿಕ ಸಂಘಗಳು ಇರುವುದು ಮಾಲೀಕರ ವಿರುದ್ಧ ಘೋಷಣೆ ಕೂಗುವುದಕ್ಕಾಗಿ ಅಲ್ಲ ಎಂಬುದನ್ನು ಕಾರ್ಮಿಕರು ಮರೆಯಬಾರದು ಎಂದರು. ಸಮಸ್ಯೆಗಳ ಇತ್ಯರ್ಥಕ್ಕಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಮೊರೆ ಹೋದರೆ ಅಲ್ಲಿ ಪ್ರಕರಣ ಇತ್ಯರ್ಥವಾಗಲು ದೀರ್ಘ ಕಾಲ ಹಿಡಿಯುವುದರಿಂದ ಆದಷ್ಟು ಆರಂಭಿಕಹಂತದಲ್ಲಿಯೇ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಕಾರ್ಮಿಕರ ಭವಿಷ್ಯ ನಿಧಿ ಸಹಾಯಕ ಆಯುಕ್ತ ಸಚಿನ್ ಸೌರಭ್, ಸಹಾಯಕ ಕಾರ್ಮಿಕರ ಆಯುಕ್ತ ಎ.ಸಿ.ತಮ್ಮಣ್ಣ, ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಪ್ರವರ್ತನಾಧಿಕಾರಿ ಎಚ್.ಕೆ.ಆನಂದ್, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಮಹಿಳಾ ವಿಭಾಗದ ರಾಜಾಧ್ಯಕ್ಷೆ ಬಿ.ಎಸ್.ಗೀತಾ ಗಣೇಶ್, ಜಿಲ್ಲಾಧ್ಯಕ್ಷೆ ಸುಮಿತ್ರಾ ರಮೇಶ್, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜವರೇಗೌಡ ಹಾಜರಿದ್ದರು.