ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮದ ಅತ್ಯಂತ ದೊಡ್ಡ ಬೇಡಿಕೆ ಎಂದರೆ ಕುಡಿಯಲು ನೀರು ಕೊಡಿ ಎಂಬುದಾಗಿದೆ. ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರದವರೆಗೆ ಜಲರಾಶಿ ಇದ್ದರೂ ಕುಡಿಯಲು ಮಾತ್ರ ಎಟಕುತ್ತಿಲ್ಲ ಎಂಬ ಸ್ಥಿತಿಯಾಗಿದೆ. ಸ್ವಲ್ಪವೇ ಆಳ ತೋಡಿದರೂ ನೀರು ಸಿಗುತ್ತದೆ. ಆದರೆ ಅದನ್ನು ಉಪಯೋಗಿಸುವಂತಿಲ್ಲ. ಗ್ರಾಮದ ಶೇ. 90ರಷ್ಟು ಭಾಗದಲ್ಲಿ ಉಪ್ಪು ನೀರು ತುಂಬಿದೆ. ಇನ್ನು ರಸ್ತೆಗಳು ಕಿರಿದಾಗಿದ್ದು, ಅಭಿವೃದ್ಧಿಗೆ ತೊಡಕಾಗಿದೆ.
ಕುಡಿಯುವ ಶುದ್ಧ ಸಿಹಿ ನೀರು ಬೇಕೆನ್ನುವ ಬೇಡಿಕೆ ಅನಾದಿ ಕಾಲದಿಂದಲೂ ಹಾಗೆಯೇ ಇದೆ. ಬಹುಗ್ರಾಮ ಕುಡಿಯುವ ನೀರು, ಜಲಮಿಷನ್ ಯೋಜನೆಗಳ ಕನಸು ಇದೆಯಾದರೂ ನನಸಾಗುವ ಕುರಿತೇ ದೊಡ್ಡ ಪ್ರಶ್ನೆ ಕಾಡುತ್ತಿದೆ. ದ್ವೀಪ ಹೊರತು ಪಡಿಸಿ ಪೈಪ್ ಲೈನ್ ಮಾಡಿದರೂ ನೀರು ಎಲ್ಲಿಂದ ತರುವುದು ಎಂಬುದೇ ಇನ್ನೂ ಖಚಿತವಾಗಿಲ್ಲ.
ನಡಿಕೊಪ್ಪಲು ದ್ವೀಪ ಹಿಂದೆ ಊರಿನ ಬೆಲ್ಲಕ್ಕೆ ಬಹಳಷ್ಟು ಪ್ರಸಿದ್ಧಿ ಪಡೆದಿತ್ತು. ಈ ಪ್ರದೇಶಕ್ಕೆ ಹೋಗಬೇಕಾದರೆ ಈಗಲೂ ರಸ್ತೆ ಇಲ್ಲ. ದೋಣಿಯ ಮೂಲಕವೇ ಹೋಗಬೇಕಾಗಿದೆ. ಕಡಿಮೆ ಸಂಖ್ಯೆಯ ಮನೆಗಳಿರುವ ಈ ಪ್ರದೇಶದ ಜನರಿಗೆ ತಮ್ಮ ಬಾವಿಗಳಲ್ಲಿ ಹಿಂದೆ ಸಿಗುತ್ತಿದ್ದ ಸಿಹಿ ನೀರು ಮಾಯವಾಗಿ ಹೋಗಿದೆ. ಆಳವಾಗಿ ಮರಳುಗಾರಿಕೆ ನಡೆಸಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.
ಕೃಷಿ, ಹೈನುಗಾರಿಕೆ
ಅತಿಕಾರಿಬೆಟ್ಟು ಗ್ರಾಮದ ಜನರಿಗೆ ಕೃಷಿ ಮತ್ತು ಹೈನುಗಾರಿಕೆಯೇ ಮೂಲ ಕಸುಬು. ಹಾಲು ಸಂಗ್ರಹಣೆಯಲ್ಲಿ ಇಲ್ಲಿಯ ಹಾಲು ಉತ್ಪಾದಕರ ಸಂಘ ದ.ಕ. ಜಿಲ್ಲಾ ಮಟ್ಟದ ಸಾಧನೆಗೆ ಹೆಸರು ಪಡೆದ ಸಂಘವಾಗಿದ್ದು ಶೀತಲಿಕರಣ ಮಾಡುವ ವ್ಯವಸ್ಥೆ ಕೂಡ ಇಲ್ಲಿದೆ.
ಇಲ್ಲಿನ ಜನರು ಕೃಷಿ ಕೆಲಸಗಳಿಗೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿಯ ಗ್ರಾಮ ವ್ಯಾಪ್ತಿಯಲ್ಲಿ ಮಂಗಳೂರು ತಾ|ನಲ್ಲಿಯೇ ಬೃಹತ್ ಎಂದೆನಿಸಲಾಗಿರುವ 9 ಎಕ್ರೆಗೂ ಮಿಕ್ಕಿದ ಗೋಮಾಳ ಪ್ರದೇಶ ಇದೆ. ಇದನ್ನು ಸರಕಾರದ ಯೋಜನೆ ಯಡಿ ನಿವೇಶನ ಮಾಡಿ ಕೊಡಲು ಅನುಮತಿ ನೀಡಿ ಪರಿ ವರ್ತಿಸಿ ಕೊಡುವಂತೆ ಪಂಚಾಯತ್ ಸರಕಾರಕ್ಕೆ ಕೇಳಿದೆ. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಒಂದು ವೇಳೆ ಅದು ಸಾಧ್ಯವಿಲ್ಲವಾದರೆ ಜಿಲ್ಲಾ ಮಟ್ಟದ ಜಾನುವಾರು ಆಸ್ಪತ್ರೆಯನ್ನಾದರೂ ಇಲ್ಲಿ ತೆರೆಯಬಹುದು ಎಂಬುದು ಸ್ಥಳೀಯರ ಸಲಹೆಯಾಗಿದೆ.
ಕಿರಿದಾದ ರಸ್ತೆ
ಗ್ರಾಮ ಪ್ರದೇಶದ ಹೆಚ್ಚಿನ ವ್ಯಾಪ್ತಿಗೆ ಮೂಲ್ಕಿ ವಿಜಯ ಕಾಲೇಜಿನ ಬಳಿಯಿಂದ ಮಾನಂಪಾಡಿ ಮೂಲಕ ಹಾದು ಬರುವ ಕಕ್ವ-ಮಟ್ಟು ಸಂಪರ್ಕ ರಸ್ತೆಯು ವಿಸ್ತಾರವಾಗಿ ಸರಿಯಾದಲ್ಲಿ ಈ ವ್ಯಾಪ್ತಿಗೆ ಬಸ್ ಸಂಚಾರ ಸಾಧ್ಯವಾಗುತ್ತದೆ. ಇದು ಬೇಗನೆ ಈಡೇರಿದರೆ ಊರಿನ ಅಭಿವೃದ್ದಿಗೆ ವೇಗವೂ ದೊರೆಯುತ್ತದೆ.
ಸಾತಂತ್ರ್ಯ ಸೇನಾನಿ, ಬ್ಯಾಂಕ್ ರೂವಾರಿ…
ಹಿರಿಯ ಸ್ವಾತಂತ್ರ್ಯ ಯೋಧ ಉಪ್ಪಿಕಳ ರಾಮರಾಯರು ಇಲ್ಲಿಯ ಕಕ್ವ ನಿವಾಸಿಯಾಗಿದ್ದು, ಬಹಳಷ್ಟು ಹೆಸರು ಪಡೆದ ಹಿರಿಯ ಸ್ವಾತಂತ್ರ್ಯ ಸೇನಾನಿ. ವಿಜಯ ಬ್ಯಾಂಕಿನ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರು ಕೂಡ ಅತಿಕಾರಿಬೆಟ್ಟು ಗ್ರಾಮದ ಕಕ್ವದಲ್ಲಿಯೇ ಹುಟ್ಟಿ ಬೆಳೆದವರು. ದೇಶ-ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ನ್ಯಾಚುರಲ್ ಐಸ್ ಕ್ರೀಮ್ ಮಾಲಕ ರಘುನಂದನ ಕಾಮತ್ ಅವರು ಕೂಡ ಅತಿಕಾರಿಬೆಟ್ಟು ಗ್ರಾಮದ ಕೊಲಕಾಡಿ ಮೂಲದವರು. ತಮ್ಮ ಕಂಪೆನಿಯ ಮೂಲಕ ಊರಿನ ಅಭಿವೃದ್ಧಿಗೆ ಇವರು ಈಗಲೂ ಶ್ರಮಿಸುತ್ತಿದ್ದಾರೆ.
ಗ್ರಾಮದ ಜನಸಂಖ್ಯೆ- 3,000
ಮನೆಗಳ ಸಂಖ್ಯೆ- 720
ಈ ಪ್ರದೇಶವನ್ನು ಜೈನ ಮನೆತನದ ಅಧಿಕಾರಿ ಅವರು ಅರಸರಾಗಿ ಆಳಿಕೊಂಡಿದ್ದರು ಎಂಬ ಹಿನ್ನೆಲೆಯಲ್ಲಿ ಇಲ್ಲಿಗೆ ಅಧಿಕಾರಿಗಳ ಬೆಟ್ಟು ಎಂಬುದಾಗಿ ಕರೆದು ಮುಂದಕ್ಕೆ ಅತಿಕಾರಿಬೆಟ್ಟು ಎಂದು ಎನ್ನಲಾಯಿತು ಎಂಬುದಾಗಿ ಹಿರಿಯರು ಹೇಳುತ್ತಾರೆ.
ಈ ಗ್ರಾಮದ ಮಟ್ಟು ಪ್ರದೇಶದ 100 ಮನೆಗಳ ನಿವಾಸಿಗಳಿಗೆ ತಮ್ಮ ಗ್ರಾಮದಿಂದ ಹೊರಗೆ ಹೋಗಲು ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ಕೊಕ್ರಾಣಿಯ ಮೂಲಕವೇ ಸಂಪರ್ಕ ರಸ್ತೆ ಇರುವುದು.
ಇಲ್ಲಿಯ ನಡಿಕೊಪ್ಪಲ ಪ್ರದೇಶ (ಕುದ್ರು )ಊರಿನ ಬೆಲ್ಲ ತಯಾರಿಕೆಯಲ್ಲಿ ಪ್ರಸಿದ್ಧವಾಗಿತ್ತು. ವಿದೇಶಗಳಿಗೂ ಮೂಲ್ಕಿ ಬಂದರಿನ ಮೂಲಕ ರಫ್ತು ಆಗುತ್ತಿತ್ತು. ಈಗ ಬಹುತೇಕ ಬೆಲ್ಲ ತಯಾರಿಯೇ ನಿಂತು ಹೋಗಿದೆ.
ಈ ಗ್ರಾಮದಲ್ಲಿ ಕುಂಜಾರಗಿರಿ ಮಹಾಲಿಂಗೇಶ್ವರ ದೇವಸ್ಥಾನ, ಕೊಲಕಾಡಿ ಕಾಳಿಕಾಂಬ ದೇವಸ್ಥಾನ ಇದೆ. ಇಲ್ಲಿಯ ನಡಿಬೆಟ್ಟು ಧೂಮಾವತಿ ದೈವಸ್ಥಾನ ಸುಮಾರು 300 ವರ್ಷಗಳ ಇತಿಹಾಸ ಇರುವ ಪ್ರಸಿದ್ಧ ಕ್ಷೇತ್ರ.
ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ: ಮೊದಲ ಆದ್ಯತೆಯಾಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ರಸ್ತೆ ಕೂಡ ವಿಸ್ತರಣೆಯಾದರೆ ಅತಿಕಾರಿಬೆಟ್ಟು ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸರಕಾರವು ಗ್ರಾಮಕ್ಕೆ ಪೂರಕವಾದ ಯಾವುದೇ ಇಲಾಖೆಯ ಯೋಜನೆಯನ್ನು ಜಾರಿಗೊಳಿಸಿದರೂ ಅದಕ್ಕೆ ಜನರ ಬೆಂಬಲವಿದೆ. –
ಮನೋಹರ ಕೋಟ್ಯಾನ್, ಅಧ್ಯಕ್ಷರು ಗ್ರಾ.ಪಂ. ಅತಿಕಾರಿಬೆಟ್ಟು
ಕೃಷಿಯೇ ನಮ್ಮ ಜೀವಾಳ: ನಮಗೆ ಉತ್ತಮ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಸರಕಾರ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ. ಕೃಷಿಯೇ ನಮ್ಮ ಜೀವಾಳವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೋಜನೆಗಳು, ನೆರವು ಸಿಕ್ಕಿದರೆ ಉತ್ತಮ ಬದುಕು ಸಾಧ್ಯವಾಗಬಹುದು. –
ಕಿಶೋರ್ ಪಂಡಿತ್ ಮಟ್ಟು, ಅತಿಕಾರಿಬೆಟ್ಟು ಗ್ರಾಮಸ್ಥರು
-ಸರ್ವೋತ್ತಮ ಅಂಚನ್, ಮೂಲ್ಕಿ