Advertisement

ಸವದತ್ತಿ ಪಟ್ಟಣಕ್ಕೆ ನಿರಂತರ ನೀರಿನ ಬರ-ಜನರ ಪರದಾಟ

04:25 PM Apr 22, 2022 | Team Udayavani |

ಸವದತ್ತಿ: ಪಕ್ಕದಲ್ಲೇ ಮಲಪ್ರಭೆ ಹರಿಯುತ್ತಿದ್ದರೂ ಪಟ್ಟಣದ ಜನತೆ ನಿರಂತರವಾಗಿ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ. ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳ್ಳದೇ ಇಂದಿಗೂ ಜನತೆ ನಿತ್ಯ ಪರದಾಟ ತಪ್ಪಿಲ್ಲ. ನೀರಿನ ಪೂರೈಕೆ ವ್ಯತ್ಯಯದಿಂದ ಎಲ್ಲ ವಾರ್ಡಿನ ಜನತೆ ಪುರಸಭೆಗೆ ಶಪಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ.

Advertisement

ಬೇಸಿಗೆ ದಿನಗಳಲ್ಲಿ ಜೀವ ಜಲಕ್ಕಾಗಿ ಹಾಹಾಕಾರ ಸಾಮಾನ್ಯ. ಸವದತ್ತಿಯ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು ವರ್ಷಪೂರ್ತಿ ಸಮಸ್ಯೆ ಎದುರಿಸುವಂತಾಗಿದೆ. ಪಕ್ಕದಲ್ಲಿ ಮಲಪ್ರಭೆ ಇದ್ದರೂ ಸಹ ವರ್ಷಗಟ್ಟಲೇ ನೀರಿನ ಅಭಾವ ಎದುರಿಸಿ ಕಂಗಾಲಾಗಿದ್ದಾರೆ. ವರ್ಷದ 12 ತಿಂಗಳು ನೀರಿಗಾಗಿ ಪರದಾಡುವ ಸನ್ನಿವೇಶ ಸವದತ್ತಿ ಒಂದರಲ್ಲೇ ಕಾಣಬಹುದು. ಇದು ಇಲ್ಲಿನ ವಿಶೇಷ ಕೂಡ ಎನ್ನಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಜಲ ಜೀವನ ಮಿಷನ್‌ ಅಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಅತ್ಯ ಧಿಕ ಜನ ಸವದತ್ತಿ ಪಟ್ಟಣದಲ್ಲಿಯೇ ವಾಸವಿದ್ದು, ತಾಲೂಕಾ ಕೇಂದ್ರದ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಪೂರೈಕೆ ಇಲ್ಲದಿರುವುದು ಖೇದಕರ ಸಂಗತಿ. ಮಲಪ್ರಭಾ ನದಿ ಭರ್ತಿಯಾದರೂ, ಆಗದಿದ್ದರೂ ಸಹ ಪಟ್ಟಣದ ಜನತೆ ಮಾತ್ರ ನೀರಿಗಾಗಿ 6 ರಿಂದ 9 ದಿನ ಕಾಯಬೇಕಾದ ದುರವಸ್ಥೆ ಸದ್ಯಕ್ಕಿದೆ.

ಮಲಪ್ರಭಾದಿಂದ ದೂರದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ನಿರಂತರ ನೀರು ಪೂರೈಕೆ ಮಾಡುವ ಅಧಿ ಕಾರಿ ಮತ್ತು ಜನಪ್ರತಿನಿಧಿಗಳು ಸ್ಥಳೀಯ ನೀರಿನ ಬವಣೆ ಕುರಿತು ಅಸಹಾಯಕತೆ ತೋರುತ್ತಿರುವುದು ಜನತೆಯಲ್ಲಿ ಅಸಮಾಧಾನ ಹೆಚ್ಚಿಸಿದೆ. ಈ ಕುರಿತು ಕೆಲ ಸಂಘಟನೆಗಳು ಪುರಸಭೆಗೆ ಎಚ್ಚರಿಸಿದರೂ ಸುಮಾರು 100 ಕೋಟಿ ಯೋಜನೆ ಜಾರಿ ಬರಲಿದೆ ಎನ್ನುತ್ತ ಜಾರಿಕೊಳ್ಳುತ್ತಿರುವ ಪುರಸಭೆ ನೀರು ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಜನತೆ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಳ್ಳದ ದಿನಗಳೇ ಇಲ್ಲ ಎಂಬಂತಾಗಿದೆ.

ಕಳೆದ ಬೇಸಿಗೆಗೂ ಮೊದಲೇ ಸಂಘ ಸಂಸ್ಥೆಗಳು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿದ್ದರೂ ಪುರಸಭೆ ಮಾತ್ರ 100 ಕೋಟಿ ಕ್ರಿಯಾ ಯೋಜನೆ ಸಿದ್ದಪಡಿಸುವದರಲ್ಲಿ ಕಾಲಹರಣ ಮಾಡುತ್ತಿದೆ. ಆದರೆ ಇದುವರೆಗೂ ಆಯೋಜನೆ ಜಾರಿಯಾಗಿಲ್ಲ. ಸದ್ಯ ನಗರದ ಸುಮಾರು 60 ಸಾವಿರ ಜನತೆ ನೀರಿಗಾಗಿ ಕಾಯದೆ ವಿಧಿ ಇಲ್ಲ ಎಂಬ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸ್ಥಳೀಯ ಶಾಸಕ ಆನಂದ ಮಾಮನಿ ನೀರಿನ ಸೌಲಭ್ಯ ಮತ್ತು ಪೂರೈಕೆ ಸಮಸ್ಯೆ ಅರಿತು ಶಾಶ್ವತ ಕುಡಿಯುವ ನೀರು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವದೆಂದು ಸಮಾರಂಭಗಳಲ್ಲಿ ಹೇಳುತ್ತಿದ್ದರೂ ನಿತ್ಯ ಜನತೆ ನೀರಿಗಾಗಿ ಕಷ್ಟಪಡುವ ಕಾಲ ಯಾವಾಗ ನಿಲ್ಲುವುದೆಂಬುದನ್ನು ಸಮಯವೇ ನಿರ್ಧರಿಸಬೇಕಿದೆ. ­

  • ಸಂಘ-ಸಂಸ್ಥೆಗಳಿಂದ ಶಾಶ್ವತ ಯೋಜನೆಗೆ ಆಗ್ರಹ ­
  • 100 ಕೋಟಿಯ ಕ್ರಿಯಾ ಯೋಜನೆ ಸಿದ್ದಪಡಿಸುವದರಲ್ಲಿಯೇ ಕಾಲಹರಣ
Advertisement

ಸ್ಥಳಿಯವಾಗಿ ಕೆಲ ಆರ್‌. ಪ್ಲಾಂಟ್‌ಗಳಿದ್ದು, ಇದರಲ್ಲಿ ಪುರಸಭೆ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಒಂದೇ ಸಮರ್ಪಕ ನಿರ್ವಹಣೆಯಲ್ಲಿದ್ದು, ಇನ್ನುಳಿದವು ಹಾಳು ಬಿದ್ದಿವೆ. ಕಳೆದ ತ್ತೈಮಾಸಿಕ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಗುತ್ತಿಗೆದಾರರನ್ನು ಕರೆಸಿ ತಾಕೀತು ಮಾಡಿದರೂ ಗುತ್ತಿಗೆದಾರರು ಎಚ್ಚೆತ್ತುಕೊಂಡಿಲ್ಲ.

ಶಾಶ್ವತ ಕುಡಿಯುವ ನೀರಿಗಾಗಿಕ್ರಿಯಾಯೋಜನೆ ತಯಾರಿಸಿದ್ದು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಸರಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. -ಪಿ.ಎಮ್‌. ಚನ್ನಪ್ಪನವರ, ಮುಖ್ಯಾಧಿಕಾರಿ, ಸವದತ್ತಿ ಪುರಸಭೆ

ಪ್ರತಿ ಬಾರಿ ಹೇಳಿದರೂ ಅದೇ ಕಥೆ-ವ್ಯಥೆ. ಹೋರಾಟಗಳೂ ನಡೆದರೂ ಪರಿಗಣಿಸುತ್ತಿಲ್ಲ. ಜನತೆಗೆ ನೀರು ಪೂರೈಕೆ ಮಾಡುವ ಅವಶ್ಯಕತೆ ಅಧಿಕಾರಿಗಳಿಗಿಲ್ಲ. ಒಟ್ಟಾರೆ ಸವದತ್ತಿ ಜನತೆ ನೀರಿನ ಸಮಸ್ಯೆ ಎದುರಿಸುವ ಹೊರತು ಬೇರೆ ವಿಧಿ ಇಲ್ಲ. –ಶಂಕರ ಇಜಂತಕರ, ಸಮಾಜ ಸೇವಕರು, ಸವದತ್ತಿ

-ಡಿ.ಎಸ್‌.ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next