Advertisement

ಕೈಕಾರ ಶಾಲೆ: ಮುರಿದ ಛಾವಣಿ ದುರಸ್ತಿಯಾಗಲಿ

03:25 AM May 31, 2018 | Team Udayavani |

ನಿಡ್ಪಳ್ಳಿ: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಒಂದು ಬದಿ ಬೀಳತೊಡಗಿದೆ. ಶಾಲೆ ಆರಂಭವಾಗಿರುವ ಕಾರಣ, ಅದನ್ನು ತತ್‌ಕ್ಷಣವೇ ದುರಸ್ತಿ ಮಾಡಿಸಬೇಕಿದೆ. ಶಾಲಾ ಕಟ್ಟಡ ನಿರ್ಮಾಣವಾಗಿ ಕೆಲವು ದಶಕಗಳೇ ಕಳೆದಿದ್ದು, ಆಮೇಲೆ ಯಾವುದೇ ರೀತಿಯ ದುರಸ್ತಿ ಆಗಿಲ್ಲ. ಉದ್ದವಾಗಿರುವ ಈ ಕಟ್ಟಡದಲ್ಲಿ ನಡುವೆ ಮರೆ ನಿರ್ಮಿಸಿ, ಎರಡು ತರಗತಿಗಳನ್ನು ನಡೆಸಲಾಗುತ್ತಿತ್ತು. ಸಭಾಭವನವಾಗಿಯೂ ಅದು ಬಳಕೆಯಾಗುತ್ತಿತ್ತು. ಎರಡು ವರ್ಷಗಳಿಂದ ಛಾವಣಿ ಶಿಥಿಲಗೊಂಡಿದೆ. ಒಳಗೆ ಹೋಗಲೂ ಭಯವಾಗುವಂತಿದ್ದು, ಬಾಗಿಲು ಮುಚ್ಚಲಾಗಿದೆ. ಇಲ್ಲಿ ಮಕ್ಕಳ ಸಂಖ್ಯೆ ಸ್ವಲ್ಪ ಕಡಿಮೆ ಇದ್ದ ಕಾರಣ ಉಳಿದ ಕೊಠಡಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿಯ ಒಂದು ಬದಿ ಪಕ್ಕಾಸು ಮುರಿದು ಛಾವಣಿಗೆ ಹಾನಿಯಾಗಿದೆ. ಈ ಮಳೆಗಾಲದಲ್ಲಿ ಗೋಡೆ ಬೀಳುವುದನ್ನು ತಪ್ಪಿಸಲು ಆದಷ್ಟು ಬೇಗ ಹೊಸ ಮಾಡು ನಿರ್ಮಿಸಬೇಕಿದೆ.

Advertisement


ಮನವಿಗೆ ಸ್ಪಂದಿಸಿ

ಶಾಲೆಯ ಕೊಠಡಿ ದುರಸ್ತಿಗಾಗಿ ಆರು ತಿಂಗಳ ಹಿಂದೆಯೇ ತಾ.ಪಂ., ಜಿ.ಪಂ. ಹಾಗೂ ಶಾಸಕರಿಗೆ ಲಿಖೀತ ಮನವಿ ಸಲ್ಲಿಸಲಾಗಿತ್ತು. ಅನುದಾನ ಒದಗಿಸಿ ದುರಸ್ತಿ ಮಾಡಿಸುವ ಬಗ್ಗೆಯೂ ಭರವಸೆ ನೀಡಿದ್ದರು. ಇತ್ತೀಚೆಗೆ ಜಿ.ಪಂ. ಅಧಿಕಾರಿಗಳು ಕರೆ ಮಾಡಿ, ಶಾಲೆಯ ಸ್ಥಿತಿಗತಿ ಬಗ್ಗೆ ತತ್‌ ಕ್ಷಣದ ವರದಿ ಸಲ್ಲಿಸಲು ಸೂಚಿಸಿದಾಗ ಚಿತ್ರಗಳ ಸಹಿತ ವರದಿ ನೀಡಲಾಗಿತ್ತು. ಈ ಮನವಿಗೆ ಶೀಘ್ರವೇ ಸ್ಪಂದಿಸಿ, ಕೊಠಡಿಯನ್ನು ಉಳಿಸಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷೆ ಸರೋಜಿನಿ ತಿಳಿಸಿದ್ದಾರೆ.

ಬಾವಿಯಲ್ಲಿ ಕುಡಿಯುವ ನೀರು ಕಡಿಮೆಯಾದಾಗ ಕೊಳವೆ ಬಾವಿ ತೋಡಿದ್ದರಿಂದ ಸಮಸ್ಯೆ ಪರಿಹಾರವಾಗಿದೆ. ಬಾವಿಯಲ್ಲಿ ಫೆಬ್ರವರಿವರೆಗೆ ನೀರು ಇರುತ್ತದೆ. ಆಮೇಲೆ ಕೊಳವೆ ಬಾವಿ ನೀರನ್ನು ಬಳಸಲಾಗುತ್ತದೆ. ಕೈಕಾರ ಶಾಲೆಯು ಸಂಟ್ಯಾರ್‌ – ರೆಂಜ ಮುಖ್ಯ ರಸ್ತೆಯ ಅಂಚಿನಲ್ಲಿದೆ. ಶಾಲೆ ಕಟ್ಟಡ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆವರಣ ಗೋಡೆ ನಿರ್ಮಾಣ ಆಗಬೇಕೆಂದು ಅಧ್ಯಕ್ಷರು ಹೇಳುತ್ತಾರೆ. ಕನ್ನಡ ಶಾಲೆಗಳ ಬಗ್ಗೆ ಸರಕಾರದ ಇಂತಹ ನಿರ್ಲಕ್ಷ್ಯ ಸಲ್ಲದು. ಕೊಠಡಿಯ ದುಸ್ಥಿತಿ ಕಂಡು ಬೇಸರವಾಗುತ್ತಿದೆ. ದುರಸ್ತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡುತ್ತಿಲ್ಲ. ಸರಿಯಾದ ವ್ಯವಸ್ಥೆ ಮಾಡದಿದ್ದರೆ ಸರಕಾರಿ ಶಾಲೆ ಉಳಿಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ಅನುದಾನಕ್ಕೆ ಪ್ರಯತ್ನ
ಕೈಕಾರ ಶಾಲೆ ದುರಸ್ತಿಗಾಗಿ ಮನವಿ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. ಇದಕ್ಕೆ ಸಣ್ಣ ಮಟ್ಟದ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಸರಕಾರದ ಮಟ್ಟದಿಂದಲೇ ಬಿಡುಗಡೆ ಆಗಬೇಕಿದ್ದು, ಪ್ರಯತ್ನಿಸಲಾಗುವುದು.
– ಹರೀಶ್‌ ಬಿಜತ್ರೆ, ತಾ.ಪಂ. ಸದಸ್ಯರು, ಒಳಮೊಗ್ರು ಕ್ಷೇತ್ರ

— ಗಂಗಾಧರ ಸಿ.ಎಚ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next