Advertisement
ತಾಯಿಯ ಗರ್ಭದಿಂದ ಹೊರಬಿದ್ದು ಭೂ ಸ್ಪರ್ಶ ಮಾಡುವ ವೇಳೆಯು ಲಗ್ನ ಭಾವವನ್ನು ಸೃಷ್ಟಿಸುತ್ತದೆ. ಈ ಭಾವವು ಆ ದಿವಸದ ಸೂರ್ಯೋದಯವನ್ನು ಬಹು ಮುಖ್ಯವಾಗಿ ಅವಲಂಬಿಸಿರುತ್ತದೆ. ಸೂರ್ಯೋದಯವು ಸುಮಾರಾಗಿ ಒಂದು ಊರಿಗಿಂತ ಇನ್ನೊಂದು ಊರಿನಲ್ಲಿ ತುಸು ಭಿನ್ನವಾಗಿ ಕಾಣುವುದುಂಟು. ಬೆಂಗಳೂರು ಶಿವಮೊಗ್ಗೆಯ ನಡುವೆ ಅಂಥ ಭಾರೀ ದೂರವಿರದಿದ್ದರೂ ಸೂಕ್ಷ್ಮವಾದ ವ್ಯತ್ಯಾಸ ಇದ್ದೇ ಇರುತ್ತದೆ. ಉದಾಹರಣೆಗೆ ಈ ತಿಂಗಳ 20ನೇ ತಾರೀಕು ಬೆಳಗಿನ 6.55ರ ವೇಳೆಯಲ್ಲಿ ಬೆಂಗಳೂರಿನಲ್ಲಿ ಒಂದು ಶಿಶು ಜನಿಸಿತು ಎಂದು ಅಂದುಕೊಳ್ಳಿ. ಅದೇ ವೇಳೆಗೆ ಶಿವಮೊಗ್ಗೆಯಲ್ಲೂ ಒಂದು ಮಗು ಜನಿಸಿತು ಎಂದಿಟ್ಟುಕೊಳ್ಳಿ.ಈ ಎರಡೂ ಶಿಶುಗಳು ಒಂದೇ ಸ್ಟಾಂಡರ್ಡ್ ಟೈಮ್‌ಗೆ ಜನಿಸಿದ್ದರೂ, ಬೆಂಗಳೂರಿನ ಮಗು ಮೂಲಾ ನಕ್ಷತ್ರದ 3ನೇ ಚರಣದಲ್ಲಿ ಹುಟ್ಟಿದ್ದು 7-26-12 ಡಿಗ್ರಿ ಹೊಂದಿರುತ್ತದೆ. ಅದೇ ಶಿವನೊಗ್ಗದಲ್ಲಿ ಜನಿಸಿದ ಮಗು ಮೂಲಾ ನಕ್ಷತ್ರದ 3ನೇ ಚರಣದಲ್ಲಿದ್ದು, 5-10-50 ಡಿಗ್ರಿ ಪಡೆದಿರುವ ಲಗ್ನ ಭಾವವನ್ನು ಪ್ರತಿನಿಧಿಸುತ್ತದೆ. ಚಂದ್ರನ ಸಂಬಂಧವಾಗಿಯೂ ಈ ರೀತಿಯ ಅಂತರಗಳಿದ್ದು, ಉಳಿದ ಗ್ರಹಗಳೂ ಒಂದಲ್ಲ ಒಂದು ಸೂಕ್ಷ್ಮ ವ್ಯತ್ಯಾಸ ಪಡೆದಿರುತ್ತವೆ. ಈ ವ್ಯತ್ಯಾಸಗಳ ಕುರಿತಾದ ಅಧ್ಯಯನವನ್ನು ಒಬ್ಬ ಜ್ಯೋತಿಷಿ ಪೂರೈಸಬೇಕಾಗಿದೆ. ಇಂಥ ನಿಖರ ಅಧ್ಯಯನ ನಡೆದಾಗಲೇ ಗ್ರಹಗಳ ಪ್ರಭಾವ ಇಂಥದೇ ಎಂಬುದನ್ನು ನಿಷ್ಕರ್ಷಿಸಲು ಸಾಧ್ಯ. ಆದರೆ, ನೆನಪಿಡಿ, ಈ ಸೂಕ್ಷ್ಮ ವ್ಯತ್ಯಾಸದ ಸ್ವರೂಪ ಹೇಗಿರುತ್ತದೆ ಎಂದರೆ ಎಲ್ಲಾ ಮನುಷ್ಯರ ರಕ್ತವೂ ಕೆಂಪುಬಣ್ಣ, ರುಚಿಯಲ್ಲಿ ಉಪ್ಪು, ಸಾಂದ್ರತೆಯಲ್ಲಿ ನೀರಿಗಿಂತ ದಪ್ಪ ಎಂಬುದನ್ನು ಯಾರೇ ಆಗಲಿ ಹೇಳಿ ಬಿಡಬಹುದಾದರೂ, ರಕ್ತದ ಗ್ರೂಪ್ (ವಿಭಾಗ) ಇದೇ ಎಂದು ನಿರ್ಧರಿಸಲು ವೈದ್ಯರಿಗೆ ಸೂಕ್ಷ್ಮವಾದ ವಿಶ್ಲೇಷಣೆಗಾಗಿನ ಪ್ರಯತ್ನಗಳು ಅವಶ್ಯವಾಗಿವೆ. ಒಂದೇ ದೇಹದ ಒಂದು ಭಾಗದ ಜೀವಕೋಶ ಪುಷ್ಟಿಯನ್ನು ಪಡೆದಿದ್ದು, ಇನ್ನೊಂದೆಡೆ ದೌರ್ಬಲ್ಯದ ದೊಡ್ಡ ಮೊತ್ತವನ್ನೇ ಪಡೆದಿರಬಹುದು. ಹಾಗೆಯೇ ಲಗ್ನ ಭಾವವೂ ಕೂಡ. ವ್ಯಕ್ತಿತ್ವದ ಎತ್ತರ, ಆಳ ಅಗಲಗಳು, ವ್ಯಕ್ತಿತ್ವದ ಮೂಲಕವಾಗಿ ದಕ್ಕುವ ವರ್ಚಸ್ಸು ಹಾಗೂ ಪ್ರಭಾವಳಿಗಳು ಕೂಡ ಭಿನ್ನ ಊರಿನ ಸ್ಥಳಗಳಲ್ಲಿ ಏಕಕಾಲಕ್ಕೆ ಜನಿಸಿದ ಶಿಶುಗಳ ಸಾಲಿಗೆ ಬೇರೆ ಬೇರೆಯದೇ ಆಗಿರುತ್ತವೆ. ಇನ್ನು ಸಾವಿರಾರು ಮೈಲಿಗಳ ಅಂತರ ಕೇಳುವುದೇ ಬೇಡ.
ಲಗ್ನಭಾವದ ಮೂಲಕ ಒಬ್ಬ ವ್ಯಕ್ತಿಗೆ ಯಾವ ಗ್ರಹಗಳು ಒಳ್ಳೆಯದಾಗಿರುತ್ತದೆ. ಇನ್ಯಾವ ಗ್ರಹಗಳು ಕೆಟ್ಟವಾಗಿರುತ್ತವೆ, ಯಾವ ಪ್ರಮಾಣದಲ್ಲಿ ಒಂದು ಗ್ರಹದ ಶಕ್ತಿ ಹಾಗೂ ಮಿತಿಗಳು ಇಷ್ಟೇ ಎನ್ನುವ ನಿರ್ಧಾರ ಆಗಲ್ಪಡುತ್ತದೆ ಇತ್ಯಾದಿ ತಿಳಿಯುತ್ತದೆ. ನಾವು ಸಾಮಾನ್ಯವಾಗಿ “ಇಂಥವರು ‘ಪೂರ್ತಿ ಹುಚ್ಚು ವ್ಯಕ್ತಿ ಎಂದು ಸ್ಪಷ್ಟವಾಗಿ ಗುರುತಿಸಲ್ಪಡುವುದು ಬೇರೆ. ಪೂರ್ತಿ ಹುಚ್ಚು ಎಲ್ಲರಿಗೂ ತಿಳಿಯುವಂಥದು. ಇನ್ನೂ ಸಾವಿರಾರು ಬಗೆ ಹೊರನೋಟಕ್ಕೆ ತಿಳಿಯುವುದಿಲ್ಲ. ಸಿಟ್ಟು, ಹಠ, ತೀರಾ ಸಾಧು ಸ್ವಭಾವ, ಭಯ, ರೋಗಿಷ್ಠ ಸ್ಥಿತಿಗತಿಗಳೂಕೂಡ ಲಗ್ನ ಭಾವದಿಂದಲೇ ಸ್ಪಷ್ಟ. ಆದರೆ ಭ್ರಮೆ, ಹಗಲುಗನಸು, ಗೀಳು, ಏನೋ ಕೆಲವು ಸಲ ಅಸ್ಪಷ್ಟ ಮಾತುಗಳು, ತನಗೆ ತಾನೇ ಮಾತಾಡುವುದು, ಪರಿಪೂರ್ಣನಾಗಿರಲು ಬಯಸುವುದು, ಅನ್ಯರನ್ನು ಟೀಕಿಸುತ್ತಲೇ ಇರುವುದು, ವೃಥಾ ತೊಂದರೆ ಕೊಡುವ ದುಬುìದ್ಧಿ, ಪರರನ್ನು ತೀರಾ ಅಸಹಾಯಕ ಸ್ಥಿತಿಗೆ ತಳ್ಳುವುದು, ಸಾರ್ವಜನಿಕ ಸ್ಥಳದಲ್ಲಿ ಕಳ್ಳತನ ಮಾಡದೇ ಇರಲಾಗುವುದು ಇತ್ಯಾದಿಗಳು ಕೂಡ ಲಗ್ನ ಭಾವದಿಂದಲೇ ಹೆಚ್ಚು ಸ್ಪಷ್ಟ. ರಾಹು, ಶನಿ, ಕ್ಷೀಣಚಂದ್ರ, ದುಷ್ಟ ಬುಧ, ಕೇತು, ಕುಜ, ಸೂರ್ಯ ಗ್ರಹಗಳು ಸಮತೋಲನ ಕಳೆದುಕೊಂಡಾಗ ವೈಪರೀತ್ಯಗಳು ಸಾಮಾನ್ಯ. ಪಂಚಮಾರಿಷ್ಟ, ಬಾಲಗ್ರಹಬಾಧೆ, ವಿಚಿತ್ರ ಭ್ರಮೆಗಳು, ನಿಜಕ್ಕೂ ಕೆಲವರಿಗೆ ಮಾತ್ರ ಸಿದ್ಧಿಸಬಹುದಾದ ಆರನೇ ಇಂದ್ರಿಯದ ಶಕ್ತಿ. ಲಗ್ನಾಧಿಪತಿಯ ಮಹತ್ವದ ಪಾತ್ರ
ಲಗ್ನ ಭಾವಕ್ಕೆ ಒಬ್ಬ ಅಧಿಪತಿ ಇರುತ್ತಾನೆ. ಈತ ಗಟ್ಟಿಯಾಗಿ, ದೃಢವಾಗಿ ಜನ್ಮಕುಂಡಲಿಯಲ್ಲಿ ತೂಕಬದ್ಧವಾಗಿದ್ದರೆ ಜೀವನದ ಯಶಸ್ಸು ಬಯಸುವ ಶಕ್ತಿಯನ್ನು, ಸಾರ್ಥಕತೆಯನ್ನು ಬಹುತೇಕವಾಗಿ ಒಬ್ಬ ವ್ಯಕ್ತಿ ಪಡೆದು ಬಿಡುವುದು ಸುಲಭ. ಗಮನಿಸಿ, ಅನೇಕರಿಗೆ ಅವಕಾಶಗಳು ಕೂಡಿ ಬರುತ್ತವೆ ತಂತಾನೆ. ಹಲವರಿಗೆ ಪ್ರತಿಭೆ ಇರುತ್ತದೆ. ಆದರೂ, ಅವಕಾಶಗಳು, ದೈವ ಬೆಂಬಲ ಎಂದೇ ಗ್ರಹಿಸಬೇಕಾದ ಸಮಂಜಸ ವ್ಯಕ್ತಿಯ ಜತೆಗಿನ ಒಡನಾಟ ದೊರಕಲಾರದು. ಕೆಲವರಿಗೆ ಬದುಕಿನ ಮೊದಲ ಭಾಗದಲ್ಲಿ ಜೀವನದಲ್ಲಿ ಮೇಲೇರುವ ಸೂಚನೆ, ಕೌಶಲ್ಯ ಪ್ರದರ್ಶನ ತೋರಿಸುತ್ತಾರೆ. ನಂತರ ದಿಢೀರನೆ ಅದು ಕುಸಿಯುತ್ತದೆ. ಹಲವರಿಗೆ ಮೊದಲು ಏನೂ ಇರದು. ಆದರೆ, ನಂತರ ಎಲ್ಲವನ್ನೂ ಪಡೆಯುತ್ತಾರೆ. ಹಾಗಂತ ಹಣ ಇದ್ದ ಮಾತ್ರಕ್ಕೆ ಅದನ್ನೇ ವರ್ಚಸ್ಸು, ತೂಕ ಎಂದು ಊಹಿಸಬಾರದು.
Related Articles
ಖಂಡಿತವಾಗಿಯೂ ಸಾಧ್ಯವಿದೆ. ಮನೋವೈದ್ಯರಿಗೆ ಸವಾಲಾದ ವಿಷಯಗಳನ್ನು ಜಾತಕ ಕುಂಡಲಿಯ ಲಗ್ನಭಾವ, ಲಗ್ನಾಧಿಪತಿಗಳನ್ನು ವಿಶ್ಲೇಷಿಸಿ, ಹಲವು ಪರಿಹಾರ ರೂಪಗಳನ್ನು ಸಂಯೋಜಿಸುವುದರ ಮೂಲಕ ನಿಯಂತ್ರಿಸಬಹುದು. ಮಾತು, ಧೈರ್ಯ, ಸ್ವಭಾವ ದೋಷ ನಿವಾರಣೆಗಳನ್ನು ಕುರಿತು ಒಬ್ಬ ಉತ್ತಮ ಜ್ಯೋತಿಷಿ, ಮನೋವೈದ್ಯರನ್ನೂ ಮೀರಿ ಸಮಸ್ಯೆ ನಿಭಾಯಿಸುವ ಪರಿಪಕ್ವತೆ ತೋರಬಹುದು. ಈ ಲೇಖನದ ಉದ್ದೇಶ ಮನೋವೈದ್ಯರನ್ನು ಉಪೇಕ್ಷಿಸುವುದಲ್ಲ. ವಿಜ್ಞಾನ ಎಂದು ನಾವು ಪರಿಭಾವಿಸುವ ವಿಚಾರಗಳ ಜತೆ ಪರಿಪೂರ್ಣವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದಾದ ಶಕ್ತಿ, ಜ್ಯೋತಿಷ್ಯ ವಿಜ್ಞಾನಕ್ಕೆ ಇದೆ ಎಂಬುದನ್ನು ವಿವರಿಸಲು ಒಂದು ವಿನಯಪೂರ್ವಕ ನಿವೇದನೆ ಅಷ್ಟೆ.
Advertisement
ಹುಣ್ಣಿಮೆ ಅಮಾವಾಸ್ಯೆಗಳು ಮತ್ತು ಲಗ್ನ ಭಾವಗಳ ಅಸಮತೋಲನಹುಣ್ಣಿಮೆ, ಅಮಾವಾಸ್ಯೆಗಳ ದಿನದಂದು ಸರಿಯಾಗೇ ಇರುವ ಮನುಷ್ಯನೂ ಅತಿರೇಕವಾದ, ವ್ಯತಿರಿಕ್ತವಾದ ವ್ಯವಹಾರ, ಓಡಾಟ, ಮನೋಖನ್ನತೆ ತೋರಿಸುತ್ತಾನೆ. ಹಲವು ನಾಮಾಂಕಿತರ (ನಮಗೆ ನಾಮಾಂಕಿತರ ವಿಚಾರಗಳು ಬೇಗ ತಿಳಿಯುತ್ತವೆ. ಸಾಮಾನ್ಯರದು ತಿಳಿಯುವುದಿಲ್ಲ ಸುಲಭವಾಗಿ) ಸಾವು, ಅಪಘಾತದ ತೊಂದರೆಗಳು, ಮಾಡಬಾರದ ವಿಚಾರದಲ್ಲಿ ಮಹತ್ವದ ನಿರ್ಧಾರ ತಳೆದು ವಿಫಲವಾಗುವ ವಿಧಿ ವಿಧಾನ ಗ್ರಹಿಸುತ್ತಲೇ ಇರುತ್ತೇವೆ. ನಿರ್ಧಾರಗಳು ನಿಶ್ಚಿತ ಗುರಿ ತಲುಪುವ ವಿಚಾರಕ್ಕೆ ಬೇಕಾದ ತಾರ್ಕಿಕತೆ ಸೂಕ್ತ ಸಂದರ್ಭದಲ್ಲಿ ಬಲಾಡ್ಯರಿಗೂ ಸಿಗಲಾರದು. ಮಾಡಲು ಹೊರಡುವುದೇ ಒಂದನ್ನು, ಆಗುವುದೇ ಇನ್ನೊಂದು. ಪ್ರಧಾನಿ ಮೋದಿಯವರ ಜಾತಕದಲ್ಲಿ ಗೋಚರದ ಪರಿವರ್ತನ ಯೋಗ
ನಿಷ್ಪಕ್ಷಪಾತವಾಗಿ ಯೋಚಿಸಿದರೆ, ಪ್ರಧಾನಿ ನರೇಂದ್ರ ಮೋದಿಯವರು ತಳೆದ ಕರೆನ್ಸಿ ರದ್ಧತಿ ವಿಚಾರ ಗ್ರಹಿಸಿ. ಮೋದಿಯವರ ವರ್ಚಸ್ಸನ್ನು ವೃದ್ಧಿಸಬೇಕಾದ ಚಂದ್ರ ಹಾಗೂ ಮಂಗಳರನ್ನು ಶನೈಶ್ಚರ ಹಿಡಿತದಲ್ಲಿರಿಸಿಕೊಂಡಿದ್ದಾನೆ ಸದ್ಯ ಗೋಚರದಲ್ಲಿ. ಮೋದಿಯವರು ತಳೆದ ಅಥವಾ ಅವರ ಸಲಹೆಗಾರರ ಯೋಜನೆಗೆ ತೂಕ ಇದೆಯಾದರೂ, ಸದ್ಯದ ಕಪ್ಪು ಹಣದ ವಿಚಾರದಲ್ಲಿ ತಲುಪಬೇಕಾದ ಗುರಿ ತಲುಪಲು ಶನೈಶ್ಚರ ಬಿಡುವುದಿಲ್ಲ. ಪ್ರಧಾನಿಗಳ ಲೆಕ್ಕಾಚಾರ ತಪ್ಪುತ್ತದೆ ಎಂದರೆ ಎಂಥ ಪರಿಸ್ಥಿತಿ ಇದು? ವರ್ಚಸ್ಸಿಗೆ ಏಟು ಕೊಡಲು ಶನೈಶ್ಚರನಿಗೆ ಸಾಧ್ಯವಾಗುತ್ತಿರುವುದು ಅವರ ಲಗ್ನಭಾವದಲ್ಲಿ (ಹುಟ್ಟಿದಾಗಿನ) ಕ್ಷೀಣ (ನೀಚ ಭಾಗ ಪಡೆದ) ಚಂದ್ರ. ಸದ್ಯ ಗೋಚರದಲ್ಲಿ ನಿರಂತರವಾಗಿ ಲಗ್ನಾಧಿಪತಿ ಮತ್ತು ಚಂದ್ರರು ಬಾಧೆಯಲ್ಲಿದ್ದಾರೆ ಶನೈಶ್ಚರರ ಮೂಲಕ. ಬ್ಯಾಂಕ್ ಸಿಬ್ಬಂದಿ ಭ್ರಷ್ಟರೊಡನೆ ಕೈ ಜೋಡಿಸಿದರೆ ಎಂಥ ಕಷ್ಟ ಬಂದೀತೆಂಬುದನ್ನು ಮೋದಿಗೆ ಸಲಹೆ ಕೊಡುವವರು ಯಾಕೆ ಊಹಿಸಲಿಲ್ಲ? ಕೆಲ ಬ್ಯಾಂಕ್ ಅಧಿಕಾರಿಗಳು ನಡೆದುಕೊಂಡ ಪ್ರಶ್ನಾರ್ಹ ನಡೆ ಸುದ್ದಿಯಾಗುತ್ತಲೇ ಇದೆ. ಡಿಸೆಂಬರ್ 30ರ ಒಳಗೆ ಹಳೆಯ ನೋಟುಗಳನ್ನು ಬ್ಯಾಂಕಿಗೆ ಸಂದಾಯ ಮಾಡಬಹುದು ಎಂದು ಹೇಳಿದ ಮಾತನ್ನು ಮೋದಿಯವರಿಗೆ ಉಳಿಸಿಕೊಳ್ಳಲಾಗಲಿಲ್ಲ. ಅವರ ಮಾತನ್ನು ನಂಬಿದ್ದ ಪ್ರಾಮಾಣಿಕರಿಗೆ ತೊಂದರೆ ಬಂತಲ್ಲವೆ? ಸದ್ಯಕ್ಕಂತೂ ಇದು ಅವರ ಸೋಲು. ಲಗ್ನ ಭಾವದ ಕ್ಷೀಣ ಚಂದ್ರ ಈ ದುರವಸ್ಥೆಗೆ ವಸ್ತುವಾಗಿದ್ದಾನೆ. ಅನಂತ ಶಾಸ್ತ್ರಿ