ನಿರ್ದೇಶಕ ಗುರುಪ್ರಸಾದ್ ನಾಟ್ ರೀಚಬಲ್! ಹೀಗೆ ಹೇಳಿದ್ದು ಬೇರಾರೂ ಅಲ್ಲ, “ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್. ಹೌದು, ಅವರು ಹೀಗೆ ಹೇಳುವುದಕ್ಕೂ ಕಾರಣವಿದೆ. ಚಿತ್ರ ಮಾರ್ಚ್ 3 ರಂದು ರಿಲೀಸ್ ಆಗಲು ರೆಡಿಯಾಗಿದೆ. ನಿರ್ದೇಶಕ ಗುರುಪ್ರಸಾದ್ ಮಾತ್ರ ನಿರ್ಮಾಪಕರ ಕೈಗೆ ಸಿಕ್ಕಿಲ್ಲ. ಹಲವು ಸಲ ಮಾಡಿದ ಫೋನ್ ಕಾಲ್‌ಗೂ ಪ್ರತಿಕ್ರಿಯೆ ನೀಡಿಲ್ಲ.
ಇದರಿಂದ ನಿರ್ಮಾಪಕರು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಹೀಗೇ ಮುಂದುವರೆದರೆ, ಗುರುಪ್ರಸಾದ್ ವಿರುದ್ಧ ಚೇಂಬರ್ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ಕೊಡೋಕು ಮುಂದಾಗಿದ್ದಾರೆ ನಿರ್ಮಾಪಕರು. ಅಷ್ಟಕ್ಕೂ ಗುರುಪ್ರಸಾದ್ ಯಾಕೆ ಹೀಗೆ? ಆ ಬಗ್ಗೆ ಸ್ವತಃ ಯೋಗೇಶ್ ನಾರಾಯಣ್ ಅವರೇ “ಉದಯವಾಣಿ‘ ಜತೆ ಮಾತಾಡಿದ್ದಾರೆ.
“ಗುರುಪ್ರಸಾದ್‌ಗೆ ಹಲವು ಸಲ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ಅವರು 100% ಟ್ಯಾಕ್ಸ್ ದಾಖಲಾತಿಗೆ ಸಹಿ ಹಾಕಬೇಕು. ಇದುವರೆಗೆ ನಮ್ಮ ಕೈಗೆ ಸಿಕ್ಕಿಲ್ಲ. ಯಾಕೆ ಹೀಗೆ ಮಾಡುತ್ತಿದ್ದಾರೆಂಬುದಕ್ಕೆ ಬಲವಾದ ಕಾರಣವೂ ಇಲ್ಲ. ಅವರಿರಲಿ, ಬಿಡಲಿ ಸಿನಿಮಾ ರಿಲೀಸ್ ಆಗುತ್ತೆ. ರಿಲೀಸ್‌ಗೆ ಅವರ ಅವಶ್ಯಕತೆ ಇಲ್ಲ. ಈಗಾಗಲೇ ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇನೆ. ನನಗೆ ಅವರ ಮೇಲೆ ವೈಯಕ್ತಿಕ ಬೇಸರವಿಲ್ಲ.
ಆದರೆ, ಒಬ್ಬ ನಿರ್ದೇಶಕರಾಗಿ ತಮ್ಮ ಕೆಲಸವನ್ನು ಪೂರ್ಣಗೊಳಿಸದೆ, ಈ ರೀತಿ ನಿರ್ಮಾಪಕರ ಕೈಗೆ ಸಿಗದಿದ್ದರೆ ಹೇಗೆ? ಸಿನಿಮಾ ಮಾಡೋಕೆ ಮೂರು ವರ್ಷ ಟೈಮ್ ತಗೊಂಡ್ರು. ಇನ್ನೂ ಒಂದು ವರ್ಷ ಲೇಟ್ ಮಾಡಿದ್ರು. ಒಂದು ಸಿನಿಮಾ ಮಾಡೋಕೆ ಅಷ್ಟು ವರ್ಷ ಬೇಕಾ? ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಆ ಬಗ್ಗೆ ಯಾವ ದೂರು ಇಲ್ಲ. ಚಿತ್ರ ರಿಲೀಸ್‌ಗೆ ಹತ್ತಿರ ಬಂದಿರುವಾಗ, ನಿರ್ದೇಶಕರಾಗಿ ಜವಾಬ್ದಾರಿ ಇಟ್ಟುಕೊಂಡು ಪ್ರಚಾರ ಕಾರ್ಯಕ್ಕಾದರೂ ಬರಬಹುದಲ್ಲವೇ?
ಮೊದಲ ಕಾಪಿ ಬರೋವರೆಗೆ ಮಾತ್ರ ಜತೆಗಿರುವುದಾಗಿ ಅಗ್ರಿಮೆಂಟ್ ಆಗಿತ್ತು. ಮಿಕ್ಕ ಪ್ರಚಾರ ಕೆಲಸಗಳನ್ನು ನಾನು ವಹಿಸಿಕೊಳ್ಳುವುದಾಗಿಯೂ ಹೇಳಿದ್ದೆ. ಈಗ 100 % ಟ್ಯಾಕ್ಸ್ ದಾಖಲಾತಿಗೆ ಅವರ ಸಹಿ ಬೇಕು. ಹಾಕಿಲ್ಲ. ಸಿಗುತ್ತಿಲ್ಲ. ಅವರ ಮನೆಗೆ ಸುಮಾರು 500 ಸಲ ಹೋಗಿ ಬಂದಿದ್ದೇನೆ. ಯಾವ ಪ್ರಯೋಜವಾಗಿಲ್ಲ. ನನ್ನದೇನಾದರೂ ತಪ್ಪಿದ್ದರೆ ಹೇಳಲಿ, ವಿನಾಕಾರಣ, ಹೀಗೆ ಮಾಡಿದರೆ, ನಿರ್ಮಾಪಕರ ಗತಿ ಏನು? ಯಾವುದೇ ರೀತಿಯ ಪ್ರತಿಕ್ರಿಯೆಗೂ ಸಿಗುತ್ತಿಲ್ಲವೆಂದರೆ ಏನು ಮಾಡಬೇಕು?
ಇದು ಹೀಗೆಯೇ ಮುಂದುವರೆದರೆ, ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘಕ್ಕೆ ದೂರು ಕೊಡ್ತೀನಿ. ದೂರು ಕೊಡುವುದು ದೊಡ್ಡ ವಿಷಯವೇನಲ್ಲ. ಹಾಗೆ ಮಾಡುವುದಾಗಿದ್ದರೆ, ಯಾವಾಗಲೋ ಮಾಡುತ್ತಿದ್ದೆ. ಅವರು ಹೆಸರು ಮಾಡಲು ಎಷ್ಟೋ ವರ್ಷ ಕಷ್ಟಪಟ್ಟಿದ್ದಾರೆ. ನಾನು ದೂರು ಕೊಟ್ಟು ಹೆಸರು ಹಾಳುಮಾಡೋದು ನಿಮಿಷದ ಕೆಲಸ. ಕಂಪ್ಲೇಂಟ್ ಬರೆದು ಕೈಯಲ್ಲಿಟ್ಟುಕೊಂಡಿದ್ದೇನೆ.
ಇನ್ನೂ, ಅದನ್ನು ಸಂಬಂಧಿಸಿದವರಿಗೆ ಕೊಟ್ಟಿಲ್ಲ. ನನ್ನಿಂದ ಅವರಿಗೇನಾದರೂ ತೊಂದರೆಯಾಗಿದೆಯಾ ಹೇಳಲಿ? ಅವರಿಗೆ ನಾನು ಕೇಳಿದ ಸಂಭಾವನೆಗಿಂತ ಎಕ್ಸ್ಟ್ರಾನೇ ಕೊಟ್ಟಿದ್ದೇನೆ. ಇಷ್ಟಾದರೂ, ಸ್ಪಂದಿಸುತ್ತಿಲ್ಲ’ ಎಂದು ಗರಂ ಆಗಿ ಹೇಳುತ್ತಾರೆ ನಿರ್ಮಾಪಕರು. ಇಡೀ ಚಿತ್ರತಂಡ ನಮ್ಮೊಂದಿಗಿದೆ. ಎಲ್ಲರೂ ನಿರ್ದೇಶಕರಿಗೆ ಫೋನ್ ಮಾಡಿದರೂ, ಪ್ರಯೋಜನವಾಗಿಲ್ಲ.
ಸ್ವತಃ, ಲಕ್ಷ್ಮೀ ಮೇಡಮ್ ಅವರೇ ನಾಲ್ಕೈದು ಸಲ ಕಾಲ್ ಮಾಡಿದರೂ ರೆಸ್ಪಾನ್ಸ್ ಮಾಡಿಲ್ಲ. ಚಿತ್ರ ಚೆನ್ನಾಗಿ ಮಾಡಿದ್ದಾರೆ. ಆದರೆ, ಇಂತಹ ವಿಷಯದಲ್ಲಿ ಕೆಟ್ಟವರಾಗುತ್ತಿದ್ದಾರೆ. ದಾಖಲೆಗಳನ್ನೆಲ್ಲಾ ಕೊಡಬೇಕು. ಅವರ ಸಹಿ ಬೇಕು. ಆದರೆ, ಕೈಗೆ ಸಿಗುತ್ತಿಲ್ಲ. ಇನ್ನೆರೆಡು ದಿನ ನೋಡಿ, ಆಮೇಲೆ ಏನು ಮಾಡಬೇಕೋ ಹಾಗೆ ಮಾಡ್ತೀನಿ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ.