ರಾಂಚಿ: ಇದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಗೆಲುವು ಅನ್ನುವುದಕ್ಕಿಂತ ಡೆಲ್ಲಿ ದಬಾಂಗ್ ತಂಡದ ದೌರ್ಬಲ್ಯಕ್ಕೆ ಒಲಿದು ಸೋಲು ಎನ್ನುವುದೇ ಸೂಕ್ತ. ಹಾಗಿತ್ತು ಪ್ರೊ ಕಬಡ್ಡಿ ರಾಂಚಿ ಚರಣದ 3ನೇ ದಿನದ ಮೊದಲನೇ ಪಂದ್ಯ. ಒಂದು ಕಡೆ ದೆಹಲಿ ತಂಡದಲ್ಲಿನ ದಾಳಿ ವಿಭಾಗ ಅತ್ಯಂತ ದುರ್ಬಲ, ಮತ್ತೂಂದು ಕಡೆ ಜೈಪುರ ತಂಡದಲ್ಲಿನ ಬಲಿಷ್ಠ ರಕ್ಷಣಾ ವಿಭಾಗ, ಇದು ದೆಹಲಿ ಸೋಲಿನಲ್ಲಿ ನಿರ್ಣಾಯಕ ಪಾತ್ರವಹಿಸಿತು. ಸೋಲಿನ ಅಂತರ 25-36.
ಪಂದ್ಯದ ಮೊದಲರ್ಧದಲ್ಲೇ ಇರಾನಿ ಆಟಗಾರ ಮೆರಾಜ್ ಶೇಖ್ ನಾಯಕತ್ವದ ದೆಹಲಿ ಸೋತಾಗಿತ್ತು. 2ನೇ ಅವಧಿಯಲ್ಲಿ ಅದು ಖಚಿತಗೊಂಡಿತು ಎಂದಷ್ಟೇ ಹೇಳಬಹುದು. ಅತ್ಯಂತ ಸುಲಭವಾಗಿ ಮಂಜೀತ್ ಚಿಲ್ಲರ್ ನಾಯಕತ್ವದ ಜೈಪುರಕ್ಕೆ ಬಲಿಯಾದ ದೆಹಲಿ ಮೊದಲರ್ಧದಲ್ಲಿ ಗಳಿಸಿದ ಅಂಕ 9-18. ಈ ಪ್ರಮಾಣದ ಅಂತರವನ್ನು ಇಟ್ಟುಕೊಂಡು 2ನೇ ಅವಧಿಯಲ್ಲಿ ತಿರುಗಿ ಬೀಳುವುದು ಎಂತಹ ತಂಡಕ್ಕೂ ಕಷ್ಟ. ಇನ್ನು ದೆಹಲಿಯಂತಹ ದುರ್ಬಲ ತಂಡಕ್ಕೆ ಅದು ಸಾಧ್ಯವೇ ಇಲ್ಲದ ಮಾತಾಗಿತ್ತು. ಫಲಿತಾಂಶವೂ ಅದನ್ನೇ ಸಾಬೀತುಪಡಿಸಿತು.
2ನೇ ದೆಹಲಿ ತಿಣುಕಾಟ: ಮೊದಲರ್ಧದ 14ನೇ ನಿಮಿಷದಲ್ಲಿ ದೆಹಲಿ ಆಲೌಟಾಗಿತ್ತು. 2ನೇ ಅವಧಿಯಲ್ಲಿ ಅಂದರೆ ಪಂದ್ಯದ 24ನೇ ನಿಮಿಷದಲ್ಲಿ ದೆಹಲಿ ಮತ್ತೂಮ್ಮೆ ಆಲೌಟಾಯಿತು. ಆಗಿನ ಅಂಕ ಸರಿಯಾಗಿ 24-12. ಇಲ್ಲಿಂದ ನಂತರ ದೆಹಲಿ ರಕ್ಷಣಾ ವಿಭಾಗ ಚುರುಕುಗೊಂಡಿತು. ದಾಳಿಯಲ್ಲೂ ವೇಗ ಪಡೆಯಿತು. ದೆಹಲಿ ಸ್ಫೂರ್ತಿಯುತ ಹೋರಾಟದ ಕಾರಣ ಜೈಪುರ 3 ಬಾರಿ ಆಲೌಟಾಗುವ ಸನಿಹ ತಲುಪಿತ್ತು.
ಅದರಲ್ಲೂ ಪಂದ್ಯದ 32ನೇ ನಿಮಿಷದಲ್ಲಿ ದೆಹಲಿ ನಾಯಕ ಮೆರಾಜ್ ಶೇಖ್ ದಾಳಿಗೆ ಧಾವಿಸಿದರು. ಆಗ ಅವರು ಮಾಡಿದ ಸಣ್ಣ ತಪ್ಪಿನಿಂದ ಔಟಾಗಿ ಹೊರಬಿದ್ದರು. ಜೈಪುರ ಆಲೌಟ್‌ನಿಂದ ಬಚಾವಾಯಿತು. ಮಾತ್ರವಲ್ಲ ಹೆಚ್ಚುವರಿ ಅಂಕ ಪಡೆದು ಬಲಿಷ್ಠಗೊಂಡಿತು. ಒಂದು ವೇಳೆ ಇಲ್ಲಿ ಮೆರಾಜ್ ಎಡವದಿದ್ದರೆ ಫಲಿತಾಂಶ ಅದಲುಬದಲಾಗುವ ಸಾಧ್ಯತೆಯಿತ್ತು, ಕನಿಷ್ಠ ಪಕ್ಷ ದೆಹಲಿ ಸೋಲಿನ ಅಂತರ ಅತ್ಯಂತ ಕಡಿಮೆಯಾಗಿರುತ್ತಿತ್ತು.
ಇದಾದ ನಂತರವೂ ಇನ್ನೆರಡು ಬಾರಿ ಜೈಪುರ ಆಲೌಟಾಗುವ ಹಂತ ತಲುಪಿದರೂ ಅದನ್ನು ಸಾಧಿಸುವಲ್ಲಿ ದೆಹಲಿ ವಿಫಲವಾಯಿತು. ಪಂದ್ಯದ ಕೊನೆಯ ನಿಮಿಷದಲ್ಲೂ ಹಾಗೆಯೇ ಆಯಿತು. ಜೈಪುರ ಕೋಟೆ ಖಾಲಿಯಾಗಿ ಒಬ್ಬರು ಮಾತ್ರ ಉಳಿದುಕೊಂಡಿದ್ದರು. ಜೈಪುರ ಕೊನೆಯ ದಾಳಿಗಾರನನ್ನು ಹಿಡಿಯುವ ಆತುರದಲ್ಲಿ ದೆಹಲಿ ಸಣ್ಣ ತಪ್ಪು ಮಾಡಿತು. ಪರಿಣಾಮ ಜೈಪುರಕ್ಕೆ ಮತ್ತೆರಡು ಅಂಕ. ಒಟ್ಟಾರೆ ಪಂದ್ಯವನ್ನು ವಿಶ್ಲೇಷಿಸುವುದಾದರೆ ಇದು ದುರ್ಬಲ ದೆಹಲಿಯ ಸೋಲಷ್ಟೇ. ಇದರರ್ಥ ಜೈಪುರ ಪ್ರಬಲ ತಂಡವೆಂದಲ್ಲ, ಅದಕ್ಕೆ ಪ್ರಬಲ ಎದುರಾಳಿಯಾಗಿರಲಿಲ್ಲ ಎನ್ನುವುದು ಕಟುಸತ್ಯ.
ಭಾನುವಾರದ ಪರಿಣಾಮ: 2000 ಸಮೀಪಿಸಿದ್ದ ಪ್ರೇಕ್ಷಕ ಸಂಖ್ಯೆ ರಾಂಚಿ ಚರಣದ ಮೊದಲೆರಡು ದಿನ ಪ್ರೇಕ್ಷಕರಿಂದ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 4000 ಪ್ರೇಕ್ಷಕ ಸಾಮರ್ಥ್ಯದ ಭಗತ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ 500, 600 ಸಂಖ್ಯೆಯಲ್ಲಷ್ಟೇ ಪ್ರೇಕ್ಷಕರಿದ್ದರು. 3ನೇ ದಿನ ಭಾನುವಾರವಾದ ಕಾರಣ ಜನ ಪಂದ್ಯ ನೋಡಲು ಧಾವಿಸಿ ಬಂದಿದ್ದರು. ಕೆಲವರಂತೂ 700 ಕಿ.ಮೀ. ದೂರದ ಪಟ್ನಾದಿಂದಲೇ ಬಂದಿದ್ದರು. ಒಂದು ಕಡೆ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಏಕದಿನ ಕ್ರಿಕೆಟ್ ಪಂದ್ಯವಿದ್ದರೂ ಹತ್ತಿರಹತ್ತಿರ 2000 ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದು ಗಮನಾರ್ಹವಾಗಿತ್ತು.
– ಕೆ.ಪೃಥ್ವಿಜಿತ್