Advertisement
ಬುಧವಾರ ರಾತ್ರಿ 10 ಗಂಟೆಯ ತನಕ ಒಟ್ಟು ಆರು ಆಟಗಾರರು ಕೋಟಿ ರೂ. ದಾಟಿ ಇತಿಹಾಸ ಸೃಷ್ಟಿಸಿದರು. ಹರಾಜು ಪ್ರಕ್ರಿಯೆ ಗುರುವಾರವೂ ಮುಂದುವರಿಯಲಿದೆ. ಹೂಡಾ ಖರೀದಿಗಾಗಿ ಜಿದ್ದಾಜಿದ್ದಿ ದೀಪಕ್ ನಿವಾಸ್ ಹೂಡಾ ಖರೀದಿಗಾಗಿ ಹರ್ಯಾಣ ಸ್ಟೀಲರ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ ಪ್ರಬಲ ಹೋರಾಟ ನಡೆಸಿದವು. ಅಂತಿಮವಾಗಿ ದೀಪಕ್ ಜೈಪುರ ಪಾಲಾದರು. ಕಳೆದ ವರ್ಷ ದೀಪಕ್ ಪುನೇರಿ ಪಲ್ಟಾನ್ ತಂಡದ ನಾಯಕರಾಗಿದ್ದರು. ಪ್ರಸ್ತುತ ಅವರನ್ನು ಖರೀದಿಸಲು ಹರ್ಯಾಣ 1.3 ಕೋಟಿ ರೂ.ವರೆಗೆ ಬಿಡ್ ಮಾಡಿ ಸೋತಿತು.
ಇರಾನ್‌ನ ರಕ್ಷಣಾ ಆಟಗಾರ ಫಜಲ್ ಅಟ್ರಾಚೆಲಿ ಅವರನ್ನು ಒಂದು ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತು. ಇದು ವಿದೇಶಿ ಆಟಗಾರರ ಹರಾಜು ಗುಂಪಿನಲ್ಲಿ ಮಾರಾಟಗೊಂಡ ಮೊದಲ ಗರಿಷ್ಠ ಮೊತ್ತ. ಕಳೆದ ವರ್ಷ ಅಟ್ರಾಚೆಲಿ ಗುಜರಾತ್ ತಂಡ ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ, ಪ್ರೊ ಕಬಡ್ಡಿ ಇತಿಹಾಸದಲ್ಲಿ ಕೋಟಿ ರೂ. ಪಡೆದ ಮೊದಲ ಆಟಗಾರನೆಂಬ ಹಿರಿಮೆಯೂ ಅಟ್ರಾಚಲಿ ಅವರದಾಯಿತು. ಆದರೆ ಕೆಲವೇ ಗಂಟೆಗಳಲ್ಲಿ ಇನ್ನೂ 5 ಮಂದಿ ಕೋಟ್ಯಧಿಪತಿಗಳೆನಿಸಿಕೊಂಡು ಅಟ್ರಾಚೆಲಿ ಅವರನ್ನು ಹಿಂದಿಕ್ಕಿದರು. ಮಂಜಿತ್‌ಗೆ ಕೇವಲ 20 ಲಕ್ಷ ರೂ.!
ಕಳೆದ ವರ್ಷ ಜೈಪುರ ಪರ ಆಡಿದ್ದ ಮಂಜಿತ್ ಚಿಲ್ಲಾರ್ ಆಲ್‌ರೌಂಡರ್‌ಗಳ ವಿಭಾಗದಲ್ಲಿ ತಮಿಳ್ ತಲೈವಾಸ್ ತಂಡಕ್ಕೆ ಕೇವಲ 20 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ. ಕಳಪೆ ಫಾರ್ಮ್ ನಲ್ಲಿರುವ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿ ಕೂಡ ಮುಂದೆ ಬರಲಿಲ್ಲ. ಕೊನೆಗೆ ತಮಿಳ್ ತಲೈವಾಸ್ 20 ಲಕ್ಷ ರೂ.ಗೆ ಬಿಡ್ ಮಾಡಿತು. ಆಲ್‌ರೌಂಡರ್‌ಗಳ ವಿಭಾಗದಲ್ಲಿ ರಾಣಾ ಸಿಂಗ್ 43 ಲಕ್ಷ ರೂ.ಗೆ ಬೆಂಗಾಲ್ ವಾರಿಯರ್ಗೆ ಮಾರಾಟವಾದರೆ ಶ್ರೀಕಾಂತ್ ಟೆವಾಟಿಯಾ 25 ಲಕ್ಷ ರೂ. ಪಡೆದರು.
Related Articles
ಆಲ್‌ರೌಂಡರ್‌ಗಳಲ್ಲಿ 66 ಲಕ್ಷ ರೂ.ಗೆ ಸಂದೀಪ್ ಕುಮಾರ್ ಜೈಪುರ ತಂಡಕ್ಕೆ ಹರಾಜಾ ಗಿದ್ದು ಗರಿಷ್ಠ. ಉಳಿದಂತೆ ಪರ್ವೇಶ್ ಭೈನ್ಸ್‌ವಾಲ್ 35 ಲಕ್ಷ ರೂ.ಗೆ ಗುಜರಾತ್‌ಗೆ, ಕನ್ನಡಿಗ ಜೀವಾ ಕುಮಾರ್ 45 ಲಕ್ಷ ರೂ.ಗೆ ಯುಪಿ ಯೋಧಾಕ್ಕೆ, ಮೋಹಿತ್ ಚಿಲ್ಲಾರ್ 58 ಲಕ್ಷ ರೂ.ಗೆ ಜೈಪುರ ತಂಡಕ್ಕೆ, ಮಹೇಂದ್ರ ಸಿಂಗ್ 40 ಲಕ್ಷ ರೂ.ಗೆ ಬೆಂಗಳೂರಿಗೆ, ಸುರೇಂದ್ರ ನಾಡಾ 75 ಲಕ್ಷ ರೂ.ಗೆ ಹರ್ಯಾಣ ಸ್ಟೀಲರ್ಗೆ, ಕನ್ನಡಿಗ ನೆಲಮಂಗಲದ ದರ್ಶನ್ ಜೆ. 28 ಲಕ್ಷ ರೂ.ಗೆ ತಮಿಳ್ ತಲೈವಾಸ್ ತಂಡಕ್ಕೆ ಮಾರಾಟ ವಾದರು. ಸ್ಟಾರ್ ಆಟಗಾರ ರವೀಂದ್ರ ಪಹಲ್ ಮಾರಾಟವಾಗದೆ ನಿರಾಸೆಗೊಳಗಾದರು.
Advertisement
ಮೊದಲ ಆವೃತ್ತಿಗಿಂತ ಆಟಗಾರರು 12 ಪಟ್ಟು ದುಬಾರಿ!ಹಣದ ಹರಿವನ್ನು ಗಮನಿಸಿದರೆ ಪ್ರೊ ಕಬಡ್ಡಿ ಕೂಟ ಐಪಿಎಲ್‌ಗೆ ತಾನೇನು ಕಡಿಮೆಯಿಲ್ಲ ಎಂಬ ಮಟ್ಟಕ್ಕೆ ಬೆಳೆದಿದೆ. 2018ರ 6ನೇ ಆವೃತ್ತಿ ಹರಾಜಿನಲ್ಲಿ 6 ಆಟಗಾರರು ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಹರ್ಯಾಣ ಸ್ಟೀಲರ್ಸ್‌ಗೆ ಮಾರಾಟವಾಗಿರುವ ಮೋನು ಗೋಯತ್ ಬೆಲೆ 1.51 ಕೋಟಿ ರೂ. 2014ರಂದು ನಡೆದ ಮೊದಲನೇ ಆವೃತ್ತಿ ಹರಾಜಿನ ವೇಳೆ ರಾಕೇಶ್ ಕುಮಾರ್ ಪಾಟ್ನಾ ಪೈರೇಟ್ಸ್ ತಂಡಕ್ಕೆ 12.80 ಲಕ್ಷ ರೂ.ಗೆ ಮಾರಾಟವಾಗಿದ್ದರು. ಅದಕ್ಕೆ ಹೋಲಿಸಿದರೆ ಮೋನು ಗೋಯತ್ ಬೆಲೆ 12 ಪಟ್ಟು ಹೆಚ್ಚಾಗಿದೆ. ಅಂದರೆ ಪ್ರೊ ಕಬಡ್ಡಿ ಆಟಗಾರರ ಬೆಲೆ 12 ಪಟ್ಟು ಹೆಚ್ಚಾಗಿದೆ ಎನ್ನಲಡ್ಡಿಯಿಲ್ಲ. ನಿತಿನ್ ತೋಮಾರ್ 2017ರ ಆವೃತ್ತಿಯಲ್ಲಿ ಯುಪಿ ಯೋಧಾಸ್‌ಗೆ 93 ಲಕ್ಷ ರೂ.ಗೆ ಮಾರಾಟವಾಗಿದ್ದರು. ಈ ಬಾರಿ ಸ್ವತಃ ಅವರೇ 1.15 ಕೋಟಿ ರೂ.ಗೆ ಪುನೇರಿ ಪಲ್ಟಾನ್ ಪಾಲಾಗುವ ಮೂಲಕ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಬೆಂಗಾಲ್ ತಂಡದಲ್ಲಿ ಐತ್ತೂರಿನ ಮಿಥಿನ್
ಕಡಬ: ಮುಂಬರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ ತಂಡದ ಪರ ಆಡಲು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಮಿಥಿನ್ ಕುಮಾರ್ ಆಯ್ಕೆಯಾಗಿದ್ದಾರೆ. ಕಲ್ಲಾಜೆಯ ಅಣ್ಣಯ್ಯ-ಪ್ರೇಮಾ ದಂಪತಿಯ ಪುತ್ರ ಮಿಥಿನ್ ಕುಮಾರ್ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು ಪ್ರೊ ಕಬಡ್ಡಿ 2018ರಲ್ಲಿ ಜೂನಿಯರ್ ರಾಷ್ಟ್ರೀಯ ಆಟಗಾರರಾಗಿ ಆಡಲಿದ್ದಾರೆ. ಕಳೆದ ತಿಂಗಳು ಮುಂಬಯಿಯಲ್ಲಿ ಜರಗಿದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಇವರನ್ನು ಮೇ 30ರಂದು ಬೆಂಗಾಲ್ ವಾರಿಯರ್ ತಂಡ 6.6 ಲಕ್ಷ ರೂ.ಗೆ ಖರೀದಿಸಿತು.