ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ 2024-25ರಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಪರ್ತ್ ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತವು ನಾಲ್ಕೇ ದಿನಗಳಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ನೀಡಿದ 534 ರನ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 238 ರನ್ ಗಳಿಗೆ ಅಲೌಟಾಯಿತು. ಈ ಮೂಲಕ ಬುಮ್ರಾ ಪಡೆ 295 ರನ್ ಅಂತರದ ಬೃಹತ್ ಗೆಲುವು ಪಡೆಯಿತು.
ಮೂರನೇ ದಿನದಾಟದ ಅಂತ್ಯಕ್ಕೆ ಕೇವಲ 12 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ಸೋಮವಾರ ಆರಂಭದಲ್ಲಿಯೇ ಉಸ್ಮಾನ್ ಖವಾಜಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಸ್ಮಿತ್ ಕೂಡಾ ಕೇವಲ 17 ರನ್ ಮಾಡಿ ಔಟಾದರು. ಆದರೆ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಶ್ ಅಲ್ಪ ಪ್ರತಿರೋಧ ತೋರಿದರು. ಬಿರುಸಿನ ಆಟವಾಡಿದ ಹೆಡ್ 101 ಎಸೆತಗಳಲ್ಲಿ 89 ರನ್ ಮಾಡಿ ಬುಮ್ರಾ ಎಸೆತದಲ್ಲಿ ಔಟಾದರು. ಮಿಚೆಲ್ ಮಾರ್ಶ್ 47 ರನ್ ಗಳಿಸಿದರು. ಕೊನೆಯಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 36 ರನ್ ಮಾಡಿದರು.
ಭಾರತದ ಪರ ನಾಯಕ ಜಸ್ಪ್ರೀತ್ ಬುಮ್ರಾ ಮತ್ತು ಸಿರಾಜ್ ತಲಾ ಮೂರು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಎರಡು, ಹರ್ಷಿತ್ ರಾಣಾ ಮತ್ತು ನಿತೇಶ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗೆ ಆಲೌಟಾಗಿದ್ದ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ ತಿರುಗಿ ಬಿದ್ದಿತ್ತು. ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಶತಕ ಬಾರಿಸಿದರೆ, ಕೆಎಲ್ ರಾಹುಲ್ ಅರ್ಧಶತಕ ಬಾರಿಸಿದ್ದರು. ಜೈಸ್ವಾಲ್ 161 ರನ್, ವಿರಾಟ್ ಅಜೇಯ 100 ಮತ್ತು ರಾಹುಲ್ 87 ರನ್ ಮಾಡಿದ್ದರು. ಕೊನೆಯಲ್ಲಿ ನಿತೀಶ್ ರೆಡ್ಡಿ 38 ರನ್ ಮಾಡಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ: 150 ಮತ್ತು 487-8 ಡಿಕ್ಲೇರ್
ಆಸ್ಟ್ರೇಲಿಯಾ: 104 ಮತ್ತು 238