Advertisement
ಚೆನ್ನೈ ಚರಣದಲ್ಲಿ ಆಡಿದ 2 ಪಂದ್ಯಗಳಲ್ಲಿ ಪುನೇರಿ ಪಲ್ಟಾನ್ಸ್ ತಂಡ ಆತಿಥೇಯ ತಮಿಳ್ ತಲೈವಾಸ್ ಮತ್ತು ಯುಪಿ ಯೋಧಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಕನ್ನಡಿಗ ಕೋಚ್ ಬಿ.ಸಿ. ರಮೇಶ್ ಅವರ ಸಮರ್ಥ ಮಾರ್ಗದರ್ಶನದಿಂದಲೇ ಪುನೇರಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಬಿ.ಸಿ. ರಮೇಶ್ ಜತೆ ಮಾತುಕತೆ ನಡೆಸಿತು.
“ನಮ್ಮ ಆಟಗಾರರು ಅಮೋಘ ರೀತಿಯಲ್ಲಿ ಆಡುತ್ತಿದ್ದಾರೆ. ದೀಪಕ್ ಹೂಡ ನಮ್ಮ ಸ್ಟಾರ್ ರೈಡರ್. ಅವರೊಬ್ಬರ ಆಟದಿಂದಲೇ ನಾವು ಕೆಲವು ಪಂದ್ಯಗಳಲ್ಲಿ ಗೆದ್ದಿದ್ದೇವೆ. ಸಂದೀಪ್ ನರ್ವಾಲ್, ಮೊನು, ರವಿ ಕುಮಾರ್, ರಾಜೇಶ್ ಉತ್ತಮವಾಗಿ ಆಡುತ್ತಿದ್ದಾರೆ. ಸಂಘಟಿತ ಪ್ರಯತ್ನದಿಂದ ಕಡಿಮೆ ಪಂದ್ಯಗಳಲ್ಲಿ ಗರಿಷ್ಠ 11 ಪಂದ್ಯ ಗೆದ್ದಿದ್ದೇವೆ. ಕೇವಲ ಮೂರರಲ್ಲಿ ಸೋತಿದ್ದೇವೆ’. ನಿಮ್ಮ ಮುಂದಿನ ಗುರಿ ಏನು?
“ನಾವು ಈರವರೆಗೆ ಬಿ ವಲಯದಲ್ಲಿ ಬೆಂಗಳೂರು ಬುಲ್ಸ್ ಸಹಿತ ಜೈಪುರ ಮತ್ತು ಗುಜರಾತ್ ವಿರುದ್ಧ ಸೋತಿದ್ದೇವೆ. ಜೈಪುರ ಚರಣದಲ್ಲಿ ನಾವು ಬೆಂಗಾಲ್ ವಾರಿಯರ್ ಮತ್ತು ಜೈಪುರ ಮತ್ತೆ ತವರಿನಲ್ಲಿ ಗುಜರಾತ್ ವಿರುದ್ಧ ಜಯ ಪಡೆದು ಎ ವಲಯದಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್ ಪ್ಲೇ ಆಫ್ಗೆ ಹೋಗುವುದು ಮತ್ತು ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿಯಾಗಿದೆ. ನಾವು ಈ ಹಿಂದಿನ ಪ್ರೊ ಕಬಡ್ಡಿ ಲೀಗ್‌ನಲ್ಲಿ ಎರಡು ಬಾರಿ ಸೆಮಿಫೈನಲ್ ತಲುಪಿದ್ದೇವೆ. ಇಷ್ಟರವರೆಗಿನ ನಿರ್ವಹಣೆಯನ್ನು ನೋಡಿದರೆ ನಮಗೆ ಗೆಲ್ಲುವ ಉತ್ತಮ ಅವಕಾಶವಿದೆ. ಹಾಗಾಗಿ ಪ್ರಶಸ್ತಿ ಗೆಲ್ಲುವುದೇ ನಮ್ಮ ಏಕೈಕ ಗುರಿಯಾಗಿದೆ.
Related Articles
“ನಮ್ಮ ಆಟಗಾರರು ದಿನವೂ ಕಠಿನ ತರಬೇತಿ ನಡೆಸುತ್ತಿದ್ದಾರೆ. ತವರಿನಲ್ಲಿ ಪ್ರೇಕ್ಷಕರ ಭಾರೀ ಬೆಂಬಲ ನಮಗಿರುವ ಕಾರಣ ಉತ್ತಮ ನಿರ್ವಹಣೆ ನೀಡಲು ಪ್ರೇರಣೆಯಾಗಲಿದೆ. ಹಾಗಾಗಿ ಗರಿಷ್ಠ ಗೆಲುವು ದಾಖಲಿಸಲು ಶಕ್ತಿಮೀರಿ ಪ್ರಯತ್ನ ನಡೆಸಲಿದ್ದೇವೆ’.
Advertisement
ನಿಮ್ಮ ವಲಯದಲ್ಲಿ ಯಾವ ತಂಡ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗಬಹುದು ?“ತವರಿನಲ್ಲಿ ನಾವು ಗುಜರಾತ್ ವಿರುದ್ಧ ಆಡಬೇಕಾಗಿದೆ. ಗುಜರಾತ್ ವಿರುದ್ಧ ಗೆದ್ದರೆ ನಾವು ಅಗ್ರಸ್ಥಾನಿಯಾಗಿ ಮುನ್ನಡೆಯಬಹುದು. ಗುಜರಾತ್, ಹರಿಯಾಣ ಮುನ್ನಡೆಯಬಹುದು’. ಪ್ರೊ ಕಬಡ್ಡಿ ಲೀಗ್ ಕುರಿತು ಎರಡು ಮಾತು…
“ಪ್ರೊ ಕಬಡ್ಡಿ ಲೀಗ್ ಆರಂಭವಾದ ಬಳಿಕ ಕಬಡ್ಡಿ ಕ್ರೀಡೆ ದೇಶದಾದ್ಯಂತ ಬಹಳಷ್ಟು ಜಯಪ್ರಿಯಗೊಂಡಿದೆ. ಹಿಂದೆ ನಮ್ಮನ್ನು ಗುರುತಿಸುವವರಿರಲಿಲ್ಲ. ಆದರೆ ಇದೀಗ ನಾವು ಯಾರೆಂದು ಹೆಚ್ಚಿನವರಿಗೆ ತಿಳಿದಿದೆ. ಹಳ್ಳಿ ಹಳ್ಳಿಗಳಲ್ಲೂ ಎಳೆಯ ಮಕ್ಕಳು ಕಬಡ್ಡಿ ಆಟ ಆಡುತ್ತಿದ್ದಾರೆ. ಯುವ ಕಬಡ್ಡಿ ಆಟಗಾರರು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಬಹಳಷ್ಟು ಪ್ರೋತ್ಸಾಹ ಸಿಕ್ಕಿದೆ. ಮಾತ್ರವಲ್ಲದೇ ಆಟಗಾರರ ಆರ್ಥಿಕ ಸ್ಥಿತಿ ಸುಧಾರಿಸಿದೆ, ಜೀವನಶೈಲಿ ಬದಲಾಗಿದೆ. ಕ್ರಿಕೆಟ್ ಬಿಟ್ಟರೆ ಕಬಡ್ಡಿಯೇ ದೇಶದ ಎರಡನೇ ಜನಪ್ರಿಯ ಕ್ರೀಡೆಯಾಗಿದೆ. ಪ್ರೊ ಕಬಡ್ಡಿಯಲ್ಲಿ ದೇಶ ವಿದೇಶದ ಆಟಗಾರರು ಭಾಗವಹಿಸುತ್ತಿರುವ ಕಾರಣ ಭವಿಷ್ಯದಲ್ಲಿ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವುದರಲ್ಲಿ ಸಂದೇಹವಿಲ್ಲ’. – ಶಂಕರನಾರಾಯಣ ಪಿ.