Advertisement

ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್‌ ಕುಂಠಿನಿ

11:42 AM Aug 13, 2022 | Team Udayavani |

ಮುಂಬಯಿ: ಕಳೆದ ಕೆಲವು ವರ್ಷಗಳಿಂದ ಕಲ್ಯಾಣ್‌ ಪರಿಸರವನ್ನು ಕೇಂದ್ರವನ್ನಾಗಿಟ್ಟುಕೊಂಡು ಪರಿಸರದ ಸಮಸ್ತ ಕನ್ನಡಿಗರಿಗಾಗಿ ಶ್ರಾವಣ ಮಾಸದ ದಿನಗಳಲ್ಲಿ ಒಂದು ದಿನ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಶ್ರಾವಣ ಸಾಂಸ್ಕೃತಿಕ-ಸಾಹಿತ್ಯ ಸಂಭ್ರಮವನ್ನು ಆಚರಿಸಿ ಕೊಂಡು ಬರುತ್ತಿದ್ದೇವೆ. ಎಲ್ಲರಿಗೂ ಭಾಗವಹಿಸುವ ಮುಕ್ತ ಅವಕಾಶ ನೀಡಲಾಗುತ್ತಿದ್ದು, ಈ ವರ್ಷ ದೂರದ ಕುರ್ಲಾ, ಸಾಕಿನಾಕಾ, ಕಲ್ವಾ, ಥಾಣೆ, ಡೊಂಬಿವಲಿ ಪರಿಸರದ ಕನ್ನಡಿಗರು ಕೂಡ ಭಾಗವಹಿಸಿದ್ದಾರೆ. ಕನ್ನಡ ಮಾತ್ರವಲ್ಲ ವಿವಿಧ ಪ್ರಾದೇಶಿಕ ಭಾಷೆಗಳಿಗೂ ಇಂದಿಲ್ಲಿ ಅವಕಾಶ ನೀಡಿದ್ದು, ಭಾಗವಹಿಸಿದ ಪುಟಾಣಿಗಳ ಸಹಿತ ವಯೋವೃದ್ಧರ ಉತ್ಸಾಹ, ಮತ್ತವರ ಪ್ರತಿಭೆ ಕಂಡು ಮನ ತುಂಬಿ ಬಂದಿದೆ. ತಾವೆಲ್ಲರೂ ಕಲೆ, ಸಾಹಿತ್ಯ, ಸಂಸ್ಕೃತಿಯ ಆರಾಧಕರು ಎಂಬುದರಲ್ಲಿ ಸಂದೇಹ ಇಲ್ಲ ಎಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಇದರ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ತಿಳಿಸಿದರು.

Advertisement

ಕಲ್ಯಾಣ್‌ ಪೂರ್ವದ ಲೋಕ್‌ ಫೆಡರೇಶನ್‌ ಹಾಲ್‌ನಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ವತಿಯಿಂದ ಆ. 7ರಂದು ಆಯೋಜಿಸಿದ ಶ್ರಾವಣ ಸಾಂಸ್ಕೃತಿಕ ಸಂಭ್ರಮ ಮತ್ತು ಮಹಿಳೆಯರ ಅಡುಗೆ ಸ್ಪರ್ಧೆಯ ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ಭಾಗವಹಿಸುವಂತಾಗಬೇಕು. ಇದು ಪ್ರತಿಭಾನ್ವೇಷಣೆಯಂತಹ ಸುಂದರ ಕಾರ್ಯಕ್ರಮವಾಗಿದೆ. ಸಂಸ್ಥೆ ವತಿಯಿಂದ ನೀಡಿದ ಸಮ್ಮಾನ ಸ್ವೀಕರಿಸಿದ ಹೆಸರಾಂತ ಕವಯತ್ರಿ ವೇದಾವತಿ ಭಟ್‌ ಮತ್ತು ಅಡುಗೆ ಸ್ಪರ್ಧೆಯ ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸಂಭ್ರಮದಲ್ಲಿ ಪಾಲ್ಗೊಂಡವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದರ ಜತೆಗೆ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ಸಮ್ಮಾನ ಸ್ವೀಕರಿಸಿದ ವೇದಾವತಿ ಭಟ್‌  ಮಾತನಾಡಿ, ಇಲ್ಲಿನ ಸದಸ್ಯರಲ್ಲಿರುವ ಉತ್ಸಾಹ, ಶಿಸ್ತು, ಪ್ರೀತ್ಯಾದರದ ಸಂಸ್ಕಾರ, ಸಂಸ್ಕೃತಿ ಮಾದರಿ.  ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ದಂಪತಿಗೆ ಮತ್ತು ಸಾಹಿತ್ಯ ಸಮಿತಿಯ ಕಾರ್ಯಾಧ್ಯಕ್ಷೆ  ಸರೋಜಾ ಅವರಿಗೆ ಚಿರಋಣಿ ಎಂದರು.

ತೀರ್ಪುಗಾರರಾಗಿ ಸಹಕರಿಸಿದ ಪ್ರತಿಭಾ ವೈದ್ಯ ಮತ್ತು ವೇದಾವತಿ ಭಟ್‌ ಅವರನ್ನು ಹಾಗೂ ಆರ್ಥಿಕ ನೆರವು ನೀಡಿದ ಮಹನೀಯರು ಮತ್ತು ವಿಶೇಷ ಆಮಂತ್ರಿತ ಗಣ್ಯರನ್ನು ಹೂಗುತ್ಛ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ದಂಪತಿ ಹಾಗೂ ಪದಾಧಿಕಾರಿಗಳು ಮಹಿಳಾ ವಿಭಾಗ ಪದಾಧಿಕಾರಿ ರೇಖಾ ಕೆ. ಶೆಟ್ಟಿಯವರ ಪ್ರಾರ್ಥನೆಯ ಜತೆಗೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ಪ್ರಕಾಶ್‌ ಕುಂಠಿನಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ಕುಮುದಾ ಡಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೋಶಾಧಿಕಾರಿ ಪ್ರಕಾಶ್‌ ನಾಯ್ಕ್ ನಿರೂಪಿಸಿದರು. ಸಾಹಿತ್ಯ-ಸಾಂಸ್ಕೃ ತಿಕ ಸಮಿತಿ ಕಾರ್ಯಾಧ್ಯಕ್ಷೆ ಸರೋಜಾ ಅಮಾತಿ ಸಮ್ಮಾನಿತರನ್ನು ಪರಿಚಯಿಸಿದರು.

Advertisement

ಬಹುಮಾನ ವಿಜೇತರುಗಳ ಯಾದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಬಡಿಗೇರ್‌ ಓದಿದರು. ಉಪಾಧ್ಯಕ್ಷೆ ಉಮಾ ಹುನ್ಸಿಮರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜತೆ ಕೋಶಾಧಿಕಾರಿ ಚೆನ್ನವೀರ ಅಡಿಗಣ್ಣವರ ಸಹಿತ ಎಲ್ಲ ಪದಾಧಿಕಾ ರಿಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ಹುನ್ಸಿಕಟ್ಟಿ ವಂದಿಸಿದರು. ಅಡುಗೆ ಸ್ಪರ್ಧೆಯಲ್ಲಿ ಸುಮಾರು 27 ಮಂದಿ ಪಾಲ್ಗೊಂ ಡರು. ಸುಮಾರು 40 ಮಂದಿ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.

ಅಡುಗೆ ಸ್ಪರ್ಧೆ ವಿಜೇತರು :

ಅಡುಗೆ ಸ್ಪರ್ಧೆಯ ವೆಜ್‌ ಬಿರಿಯಾನಿಯಲ್ಲಿ ಪ್ರಥಮ ಬಹುಮಾನ ವಿಜಯಲಕ್ಷ್ಮೀ ಹುನ್ಸಿಕಟ್ಟೆ, ದ್ವಿತೀಯ ಬಹುಮಾನ ಭಾರತಿ ಪ್ರಭು ಮತ್ತು ತೃತೀಯ ಬಹುಮಾನವನ್ನು ವಸಂತ ಚಂದ್ರಶೇಖರ್‌ ಪಡೆದರು. ಪಾಯಸ ವಿಭಾಗದಲ್ಲಿ ಭಾರತಿ ಪ್ರಭು ಪ್ರಥಮ, ರೇಷ್ಮಾ ಭಟ್ಕಳ ದ್ವಿತೀಯ ಮತ್ತು ಗಿರಿಜಾ ಸೊಗಲದ ತೃತೀಯ ಬಹುಮಾನ ಪಡೆದರು. ಅಂತೆಯೇ ಸಾಂಬಾರ್‌ ವಿಭಾಗದಲ್ಲಿ ಭಾರತಿ ಪ್ರಭು ಪ್ರಥಮ, ಸುಜಾತಾ ಸದಾಶಿವ ಶೆಟ್ಟಿ  ದ್ವಿತೀಯ ಮತ್ತು ಸುಜಾತಾ ಸುಕುಮಾರ್‌ ತೃತೀಯ ಬಹುಮಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next