ಆರಂಭದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಉಪೇಂದ್ರ, ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳತ್ತ ಮುಖ ಮಾಡುತ್ತಿದ್ದಾರೆ.
ಸೆಕೆಂಡ್ ಹಾಫ್ ಚಿತ್ರದಲ್ಲಿ ಪೊಲೀಸ್ ಪೇದೆಯ ಗೆಟಪ್ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದ ಪ್ರಿಯಾಂಕಾ, ದೇವಕಿ ಚಿತ್ರದಲ್ಲಿ ಮಧ್ಯ ವಯಸ್ಸಿನ ತಾಯಿಯ ಪಾತ್ರದಲ್ಲಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ಅಂಥದ್ದೇ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಈ ಬಾರಿ ಪ್ರಿಯಾಂಕಾ ಉಪೇಂದ್ರ ಪೊಲೀಸ್ ಪೇದೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸದ್ಯ ಉಗ್ರವತಾರ ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ ಉಪೇಂದ್ರ, ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮರ್ಡರ್ ಮಿಸ್ಟ್ರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಖಡಕ್ ಆಗಿರುವ, ರಫ್ ಅಂಡ್ ಟಫ್ ಸ್ವಭಾವದ ಶ್ರೀದುರ್ಗಿ ಎಂಬ ಹೆಸರಿನ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಚಿತ್ರದ ಪಾತ್ರಕ್ಕಾಗಿ ಪ್ರಿಯಾಂಕಾ ಭರ್ಜರಿ ಆಕ್ಷನ್ ಕೂಡ ಮಾಡಲಿದ್ದಾರಂತೆ. ಈಗಾಗಲೇ ಈ ಚಿತ್ರದ ಶೇಕಡಾ 30 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರು, ನೆಲಮಂಗಲ ಮೊದಲಾದ ಕಡೆಗಳಲ್ಲಿ ಈ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಗುರುಮೂರ್ತಿ ನಿರ್ದೇಶನದ ಉಗ್ರಾವತಾರ ಚಿತ್ರವನ್ನು ಎಂ.ಕೆ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರಾಧಾಕೃಷ್ಣ ಬಸ್ರೂರ್ ಸಂಗೀತ, ನಂದಕುಮಾರ್ ಛಾಯಾಗ್ರಹಣವಿದೆ.
ಇತ್ತೀಚೆಗೆ ಪ್ರಿಯಾಂಕಾ ಉಪೇಂದ್ರ ಅವರ ಬರ್ತ್ ಡೇಯಂದು ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಪ್ರಿಯಾಂಕಾ ಲುಕ್ ನೋಡುಗರ ಗಮನ ಸೆಳೆಯುತ್ತಿದೆ. ಸದ್ಯ ಕೋವಿಡ್ 19 ಲಾಕ್ ಡೌನ್ ನಿಂದಾಗಿ ಈ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು, ಈ ವರ್ಷದ ಕೊನೆಗೆ ಪ್ರಿಯಾಂಕಾ ಖಾಕಿ ಖದರ್ ತೆರೆ ಮೇಲೆ ನೋಡಬಹುದು.