ಮುಂಬಯಿ : ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ಮಿಂಚಿ “ಇಂಟರ್‌ನ್ಯಾಶನಲ್ ಐಕಾನ್’ ಎಂದು ಖ್ಯಾತಿವೆತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹೊಸದಾಗಿ “ಅಂತಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ತಾರೆ’ ಎಂಬ ವರ್ಗವನ್ನು ಸೇರಿಸಲಾಗಿದ್ದು ಇದರಡಿ “ಬೇ ವಾಚ್’ ಖ್ಯಾತಿಯ ಪ್ರಿಯಾಂಕಾ ಚೋಪ್ರಾ ಳನ್ನು ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.
ಪ್ರಿಯಾಂಕಾ ಅವರ ಕಠಿನ ಹಾಗೂ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಆಕೆಗೆ ಅಂತಾರಾಷ್ಟ್ರೀಯ ಸಿನೆಮಾ ವೇದಿಕೆಯಲ್ಲಿ ಗೌರವದ ಸ್ಥಾನ ಪ್ರಾಪ್ತವಾಗಿದೆ. ಆಕೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ತನ್ನ ಕಠಿನ ಪರಿಶ್ರಮದ ಮೂಲಕ ಪ್ರತಿಯೋರ್ವ ಭಾರತೀಯ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ದಾದಾ ಫಾಲ್ಕೆ ಅಕಾಡೆಮಿ ಮತ್ತು ಪ್ರಶಸ್ತಿ ಸಮಿತಿ ಅಧ್ಯಕ್ಷ ಗಣೇಶ್ ಜೈನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಿಯಾಂಕಾಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಅನಿಲ್ ಕಪೂರ್, ಕಪಿಲ್ ಶರ್ಮಾ, ಜೂಹಿ ಚಾವ್ಲಾ, ನಿತೀಶ್ ತಿವಾರಿ ಭಾಗವಹಿಸುವ ನಿರೀಕ್ಷೆ ಇದೆ.
ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಯ ಟ್ರಸ್ಟಿಗಳ ಮಂಡಳಿಯಲ್ಲಿ ಜಾನಿ ಲಿವರ್, ಪಹಲಾಜ್ ನಿಹಲಾನಿ, ಮಿಥುನ್ ಚಕ್ರವರ್ತಿ ಮುತ್ತ ಟಿ ಪಿ ಅಗ್ರವಾಲ್ ಇದ್ದಾರೆ. ಪ್ರಶಸ್ತಿಯನ್ನು ಜೂನ್ 1ರಂದು ಮುಂಬಯಿಯಲ್ಲಿ ನೀಡಲಾಗುವುದು.