ಬೆಂಗಳೂರು: ಅತ್ತ ಪ್ರಧಾನಿ ನರೇಂದ್ರ ಮೋದಿ ರ್‍ಯಾಲಿ ಹಾದುಹೋದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬೃಹತ್ ರ್‍ಯಾಲಿಗೆ ಗೋವಿಂದರಾಜನಗರ ಸಜ್ಜಾಗುತ್ತಿದೆ. ವಿಜಯನಗರ ಮತ್ತು ಗೋವಿಂದರಾಜನಗರದಲ್ಲಿ ಸೋಮವಾರ ಪ್ರಿಯಾಂಕಾ ಗಾಂಧಿ ರ್‍ಯಾಲಿ ನಡೆಸಲಿ ದ್ದಾರೆ. ಎರಡು ದಿನಗಳು ಮುಂಚಿತವಾಗಿಯೇ ಕ್ಷೇತ್ರದಲ್ಲಿ ಅವರನ್ನು ಕಣ್ತುಂಬಿಕೊಳ್ಳಲು ಜನ ಉತ್ಸುಕರಾಗಿದ್ದು ಕಂಡುಬಂತು.
ಶನಿವಾರ ಮತಯಾಚನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರನ್ನು ಬಹುತೇಕ ಮತದಾರರು, “ನಾನು ಮತ ಚಲಾಯಿಸುವ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಬರುತ್ತಿದ್ದಾರೆ ಎನ್ನುವುದೇ ಹೆಮ್ಮೆ.
ಎಲ್ಲೆಲ್ಲಿ ಹಾದುಹೋಗುತ್ತಾರೆ? ನಾವೂ ಭಾಗವಹಿಸಬಹುದಾ? ಎಷ್ಟು ಹೊತ್ತಿಗೆ ಬರುತ್ತಾರೆ?’ ಎಂದು ಕುತೂಹಲದಿಂದ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಕೃಷ್ಣ, “ಮತದಾರರನ್ನು ಭೇಟಿಯಾಗಲಿಕ್ಕಾಗಿಯೇ ನಾಯಕಿ ಪ್ರಿಯಾಂಕಾ ಗಾಂಧಿ ಬರುತ್ತಿದ್ದಾರೆ. ಜನರ ಮಧ್ಯೆ ರ್‍ಯಾಲಿ ಹಾದುಹೋಗಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಬೇಕು’ ಎಂದರು.
ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣೆಗೆ 3 ದಿನ ಮಾತ್ರ ಬಾಕಿ ಇವೆ. ಇದುವರೆಗೆ ಶ್ರಮ ಹಾಕಿದ್ದೀರಿ. ಇನ್ನು ಮೂರ್‍ನಾಲ್ಕು ದಿನ ಇದೇ ಉತ್ಸಾಹದಲ್ಲಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡಬಾರದು’ ಎಂದರು.
ರ್‍ಯಾಲಿ ಎಲ್ಲೆಲ್ಲಿ?
ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ರ್‍ಯಾಲಿ ನಡೆಯಲಿದ್ದು, ಸುಮಾರು ಹತ್ತು ಸಾವಿರ ಜನ ಭಾಗವಹಿಸುವ ಸಾಧ್ಯತೆ ಇದೆ. ಜಿಟಿ ಮಾಲ್‌ನಿಂದ ಆರಂಭವಾಗುವ ರ್‍ಯಾಲಿ, ಮಾಗಡಿ ರಸ್ತೆ, ಬನಶಂಕರಿ ದೇವಸ್ಥಾನ ರಸ್ತೆ, ವಿದ್ಯಾರಣ್ಯನಗರ 2ನೇ ಮುಖ್ಯರಸ್ತೆ, 1ನೇ ಮುಖ್ಯ ಕ್ಲಬ್ ರಸ್ತೆ, ಮಾರುತಿ ಹಾಸ್ಪಿಟಲ್ ವೃತ್ತ ಮತ್ತಿತರ ಕಡೆಗಳಲ್ಲಿ ಹಾದುಹೋಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.