Advertisement

ಭಾಷಣದಲ್ಲಿ ಮಾತ್ರ ಕಲ್ಯಾಣಗೊಳಿಸಿದ ಸಿಎಂ: ಕಾಂಗ್ರೆಸ್ ಟೀಕೆ

03:45 PM Sep 18, 2022 | Team Udayavani |

ಕಲಬುರಗಿ: ವಿವಿಧ ಇಲಾಖೆಗಳ ಅನುದಾನವನ್ನೇ ಕಡಿತಗೊಳಿಸಿ ಅದನ್ನೆಲ್ಲ ಕ್ರೋಢಿಕರಿಸಿ ಕಲ್ಯಾಣ ಕರ್ನಾಟಕ ಮಂಡಳಿಗೆ ನೀಡದೇ ಮಂಡಳಿಗೆ ನೀಡಲಾಗಿದೆ ಎಂದಿರುವುದು, ಈ ಭಾಗಕ್ಕೆ ಬರಬೇಕಾಗಿರುವ ಯೋಜನೆಗಳು ಕೈ ತಪ್ಪಿರುವುದು ಹಾಗೂ 371 ಜೆ ಸರಿಯಾಗಿ ಜಾರಿಗೆ ಬಾರದಿರುವ ಹತ್ತಾರು ತಪ್ಪುಗಳನ್ನು ಸರಿಪಡಿಸುವುದು ಬಿಟ್ಟು ಭಾಷಣದಲ್ಲಿ ಕಲ್ಯಾಣಗೊಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಹಾಬ್ಬಾಸಗಿರಿ ನೀಡಬೇಕು ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

Advertisement

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಒಂದು ಕಾಮಗಾರಿ ಕಕ ಭಾಗಕ್ಕೆ ತಂದಿದ್ದೇವೆ ಎಂದು ಎದೆ ತಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದರು.

ಮೂಗಿಗೆ ತುಪ್ಪ ಸವರಿದ ಸಿಎಂ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ರೂ 5000 ಕೋಟಿ ನೀಡುವುದಾಗಿ ನಿನ್ನೆ ಸಿಎಂ ಹೇಳಿ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ ಈ ಅನುದಾನ ಬಿಡುಗಡೆ ಅಸಾಧ್ಯ ಎಂಬುದು ಅವರಿಗೆ ಗೊತ್ತಿದೆ. ಕೆಕೆಆರ್ ಡಿಬಿಗೆ ಘೋಷಿತ ಅನುದಾನ ರೂ‌ 3000 ಕೋಟಿಯಲ್ಲಿ ಕೇವಲ ರೂ 1500 ಕೋಟಿ ಮಾತ್ರ ಬಿಡುಗಡೆ ಮಾಡಿ ಉಳಿದ ರೂ 1500 ಕೋಟಿಯನ್ನು ಎಸ್ ಡಿ ಪಿನಲ್ಲಿ ಬಿಡುಗಡೆ ಮಾಡದೇ ಮಹಾತ್ವಾಕಾಂಕ್ಷೆ ತಾಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆ ಅನುದಾನ ಹೆಡ್ ಆಫ್ ಅಕೌಂಟ್ ಗೆ ಬರುವುದಿಲ್ಲ. ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ ರೂ 5000 ಕೋಟಿ ನೀಡುವುದಾಗಿ ಹೇಳಿರುವುದು ಗಮನಿಸಿದರೆ, ಬೊಮ್ಮಾಯಿ ಅವರು ಮೋದಿಗಿಂತಲೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ದೋಖಾ ಹಾಗೂ ಬೊಮ್ಮಾಯಿಯವರ ಬಂಡಲ್‌ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ‌

ಸ್ಥಳೀಯ ಮುಖಂಡರ ನಿರಾಸಕ್ತಿಯಿಂದ ಕಲಬುರಗಿಯಲ್ಲಿ ಅಭಿವೃದ್ದಿಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ, ನಿಮ್ಮ ಅವಧಿಯಲ್ಲಿ 5 ಸಿಎಂ ಕೊಟ್ಟಿದ್ದೀರಲ್ಲ ನಿಮ್ಮ ಕೊಡುಗೆ ಏನಿದೆ?  ನೀವು ನಿನ್ನೆ ಉದ್ಘಾಟನೆ ಮಾಡಿದ ಕಮೀಷನರ್ ಕಚೇರಿಗೆ ಅಡಿಗಲ್ಲು ಹಾಕಿದ್ದೇ ನಾನು. ನೀವು ಬಂದಿಳಿದ ವಿಮಾನ ನಿಲ್ದಾಣ ನಿರ್ಮಿಸಿದ್ದು ನಮ್ಮ ಅವಧಿಯಲ್ಲಿ, ನಿನ್ನೆ ನೀವು ಓಡಾಡಿದ ರಸ್ತೆ ನಿರ್ಮಾಣ ಮಾಡಿದ್ದೆ ನಾವು ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.

ಯುಪಿಎ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ, ನಿಮ್ಝ್, ಜವಳಿ ಪಾರ್ಕ್, ಏಮ್ಸ್, ಮೇಕ್ ಇನ್ ಇಂಡಿಯಾ, ಇಎಸ್ ಐ ಮೇಲ್ದರ್ಜೆಗೆ ಏರಿಸುವ ಯೋಜನೆಗಳೆಲ್ಲ ಏನಾದವು? ಎಂದು ಪ್ರಶ್ನಿಸಿದ ಅವರು ಕಲಬುರಗಿ ಸಂಸದ ಉಮೇಶ್ ಜಾಧವ ಈ ಮೂರು ವರ್ಷದಲ್ಲಿ ಏನು ಮಾಡಿದ್ದಾರೆ?  ಮೋದಿ ಅವರ ಮನ್ ಕಿ ಬಾತ್ ನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿದ್ದು ಹಾಗೂ ಕೇಂದ್ರಿಯ ವಿವಿಯನ್ನು ಆರ್ಎಸ್ಎಸ್ ಕೇಂದ್ರವನ್ನಾಗಿ ಪರಿವರ್ತನೆ ಮಾಡುತ್ತಿರುವುದೇ ಇವರ ಸಾಧನೆಯಾಗಿದೆ. ಒಂದು ದೂರದರ್ಶನ ಉಳಿಸಿಕೊಳ್ಳಲಿಕ್ಕಾಗಲಿಲ್ಲ ಎಂದು ಕಿಡಿಕಾರಿದರು.

Advertisement

ಕಲಬುರಗಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ದಿ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಕೊನೆ ಪಕ್ಷ ಇಲ್ಲಿನ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಭಾಷಣ ತಯಾರು ಮಾಡಿಕೊಳ್ಳಬೇಕಿತ್ತು. ನಿರಾಣಿ ಅವರು ಮಿಷನ್ 2050 ಎನ್ನುತ್ತಾರೆ. 2019 ರಲ್ಲಿ ಕೊರೆದ ಕೊಳವೆ ಬಾವಿಗಳ ಬಿಲ್ ಪಾವತಿಯಾಗಿಲ್ಲ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಅಭಿವೃದ್ದಿ ಮಾಡುತ್ತಾರೆ ಎಂದು ಪ್ರಿಯಾಂಕ್ ಪ್ರಶ್ನಿಸಿದರು.

ಇದನ್ನೂ ಓದಿ:ಟಿಕೆಟ್ ನೀಡುವುದು ಒಬ್ಬರ ನಿರ್ಧಾರವಲ್ಲ: ಡಿಕೆಶಿ ಹೇಳಿಕೆಗೆ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ

ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜವಳಿ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ನಾನು ಹೇಳಿದರೆ ಪ್ರಿಯಾಂಕ್ ಬರೀ ಆರೋಪ ಮಾಡುತ್ತಾರೆ ಎನ್ನುತ್ತಾರೆ ಹಾಗಾಗಿ ನಾನು ಲಿಖಿತ ಪ್ರಶ್ನೆ ಕೇಳಿದಾಗ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಿ, ಈ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ದೋಷಾರೋಪಣೆ ಪಟ್ಟಿ ತಯಾರಿಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇದರರ್ಥ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತುಪಡಿಸುತ್ತದೆ ಎಂದರು.

ರಾಜ್ಯದಲ್ಲಿ‌ ಒಟ್ಟು 2,50,000 ಹುದ್ದೆಗಳು ಖಾಲಿ ಇದ್ದು ಅವುಗಳಲ್ಲಿ 20,000 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಇದಕ್ಕೆ ಉತ್ತರ ಕೊಡಿ ಎಂದರೆ ಮಾತು ಬದಲಿಸಿ ಕಾಂಗ್ರೆಸ್ ಕಾಲದಲ್ಲಿಯೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಾರೆ. ಭ್ರಷ್ಟಚಾರ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕಿಸಿ ಎಂದು ಅವರು ಸಿಎಂ ಗೆ ಸವಾಲಾಕಿದರು.

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಈ ಕೂಡಲೇ ತುಂಬಬೇಕು. ಘೋಷಿತ ಅನುದಾನ ರೂ ‌3000 ಕೋಟಿಯನ್ನು ಸಮರ್ಪಕವಾಗಿ ಹಾಗೂ ಕಾನೂನು ಬದ್ಧವಾಗಿ ಕೆಕೆಆರ್ಡಿಬಿಗೆ ಬಿಡುಗಡೆ ಮಾಡಬೇಕು. ಸಂಘದ ಅಡಿಯಲ್ಲಿ ನಡೆದ ಅವ್ಯವಹಾರದ ಅಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಖರ್ಗೆ ಇಷ್ಟನ್ನು ಮಾಡಿದರೆ ಬೊಮ್ಮಾಯಿಯವರಿಗೆ ನಿಜವಾಗಿ ಧಮ್ ಇದೆ ಅರ್ಥವಾಗುತ್ತದೆ ಎಂದರು. ಜೊತೆಗೆ ನೀವೇ ಘೋಷಿಸಿರುವಂತೆ ರೂ 5000 ಕೋಟಿ ಬಿಡುಗಡೆ ಮಾಡಿದರೆ ನಿಮ್ಮ ಫೋಟೋಗಳನ್ನು ನಾವೆ ಹಾಕಿಸಿ ಪೂಜೆ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಸವಾಲಾಕಿದರು.

ಲೋಕಾಯುಕ್ತಕ್ಕೆ ದೂರು: ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇವೆ ಎಂದರು.

ಕಲಬುರಗಿಯ ಅಪ್ಪನ ಕೆರೆಯನ್ನುಒತ್ತುವರಿ ಆಗಿದೆ ಎಂದಿರುವುದನ್ನ ಅವರೇಕೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು.? ಕೆರೆ ಒತ್ತುವರಿ ಆಗಿಲ್ಲದಿದ್ದರೆ ಜಿಲ್ಲಾಧಿಕಾರಿ ಯಾಕೆ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಅಪ್ಪುಗೌಡರು ದಾಖಲೆಗಳನ್ನು ಡಿಸಿ‌ ತೋರಿಸಲಿ. ನನಗೆ ಉತ್ತರಿಸುವುದೇ ಬೇಡ ಎಂದು ತಿರುಗೇಟು ನೀಡಿದರು.‌

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಶಿವಾನಂದ ಪಾಟೀಲ ಮರತೂರ, ಶಿವು ಹೊನಗುಂಟಿ, ಈರಣ್ಣ ಝಳಕಿ ಹಾಗೂ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next