ಕಲಬುರಗಿ: ಬೀದರ್ ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಇತರ ಆರೋಪಿಗಳ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ (ಜ.14) ದಾಳಿ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳ ಮನೆ ಮೇಲೆ ಸಂಕ್ರಾಂತಿ ದಿನವೇ ಸಿಐಡಿ ಮಿಂಚಿನ ದಾಳಿ ನಡೆಸಿದೆ. ಕಲಬುರಗಿ ನಗರದ ಕಪನೂರ ಬಡಾವಣೆಯಲ್ಲಿರುವ ರಾಜು ಕಪೂರ್ ಮನೆ, ಘಾಟಿಗೆ ಲೇಔಟ್ ನಲ್ಲಿರುವ ಗೋರಕನಾಥ್ ಮನೆ ಸೇರಿ ಒಟ್ಟು ನಾಲ್ಕು ಕಡೆ ಸಿಐಡಿ ದಾಳಿ ನಡೆಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಂಚಾಳ್ ಮತ್ತು ಈ ಆರೋಪಿಗಳಿಗೆ ಇರುವ ಸಂಬಂಧದ ಬಗ್ಗೆ ಪರಿಶೀಲನೆ ನಿಟ್ಟಿನಲ್ಲಿ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಈಗಾಗಲೇ ಈ ಪ್ರಕರಣದ 8 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸಿಐಡಿ ಡಿಐಜಿ ಶಾಂತಲು ಸಿಹ್ನಾ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಾಲ್ಕು ಕಡೆ ದಾಳಿ ನಡೆದಿದೆ.
ಅಸ್ಲಂಭಾಷಾ, ಯೇಗನಗೌಡ ಇಬ್ಬರು ಡಿವೈಎಸ್ಪಿಗಳು, ನಾಲ್ವರು ಇನ್ಸಪೆಕ್ಟರ್ಸ್, ಸೇರಿ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.